ಬೆಳ್ಳಂಬೆಳಗ್ಗೆ ಒಂಟಿಸಲಗ ಪ್ರತ್ಯಕ್ಷ ಅಂಗಡಿ ಒಳಗೆ ಸೇರಿ ಪಾರಾದ ಶಾಲಾ ಮಕ್ಕಳು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 28. ಧರ್ಮಸ್ಥಳ ಗ್ರಾಮದ ಬೊಳಿಯಾರ್ ಬಸ್ ನಿಲ್ದಾಣದ ಬಳಿ‌ ಕಾಡಾನೆಯೊಂದು ಪ್ರತ್ಯಕ್ಷಗೊಂಡಿದ್ದು, ಬಸ್ ಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳು ಅಲ್ಲೇ ಪಕ್ಕದಲ್ಲಿದ್ದ ಅಂಗಡಿ ಒಳಗೆ ಸೇರಿ ಪಾರಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿದ್ದ ಶಾಲಾ ಮಕ್ಕಳು, ಸಾರ್ವಜನಿಕರು ಒಂಟಿ ಸಲಗ ಬರುವುದನ್ನು ಕಂಡು ಭಯಭೀತರಾಗಿ ಅಂಗಡಿ ಒಳಗೆ ಸೇರಿ ಪಾರಾಗಿದ್ದಾರೆ. ಬಳಿಕ ಆನೆ ಕಾಡಿನತ್ತ ಹೆಜ್ಜೆ ಹಾಕಿದ್ದು, ಸ್ವಲ್ಪದರಲ್ಲೇ ಅಪಾಯ ತಪ್ಪಿದೆ.

ಕಳೆದ ಕೆಲ ದಿನಗಳಿಂದ ಧರ್ಮಸ್ಥಳ ಸಮೀಪದಲ್ಲಿ ಕೃಷಿ ನಾಶಮಾಡುತ್ತಿರುವ ಕಾಡಾನೆ, ಕಳೆದ ಎರಡು ವಾರಗಳ ಹಿಂದೆಯಷ್ಟೇ ಕೊಕ್ಕಡ ಸಮೀಪದ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ದಾಳಿ ಮಾಡಿ ಕೊಂದಿತ್ತು. ಇದೀಗ ಕಾಡಾನೆ ಇಂದು ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿರುವುದನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

Scroll to Top