(ನ್ಯೂಸ್ ಕಡಬ) newskadaba.com, ಜು. 21. ಹಾವೇರಿ ಜಿಲ್ಲೆಯಲ್ಲಿ ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ‘ನಕಲಿ ಸುದ್ದಿ’ ಹಬ್ಬಿಸಿದರೆಂದು ಆರೋಪಿಸಿ ಬಿಜೆಪಿಯ ಯುವ ನಾಯಕ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್‌ನಿಂದ ತೀವ್ರ ತಡೆ ಸಿಕ್ಕಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಪೀಠ, ಈ ಅರ್ಜಿಯನ್ನು ವಜಾ ಮಾಡಿದೆ.
ಅರ್ಜಿ ವಿಚಾರಣೆಗೆ ತೆಗೆದುಕೊಂಡ ಕೂಡಲೇ ಮುಖ್ಯ ನ್ಯಾಯಮೂರ್ತಿ ಗರಂ ಆಗಿ, ‘ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ಇಂಥ ವಿಷಯಗಳನ್ನು ಮತದಾರರ ಮುಂದೆ ನ್ಯಾಯಾಲಯಕ್ಕೆ ಬಾರದಂತೆ ತೆಗೆದುಕೊಳ್ಳಿ. ನ್ಯಾಯಾಲಯವನ್ನು ರಾಜಕೀಯ ವೇದಿಕೆಯಾಗಿಸಲು ಪ್ರಯತ್ನಿಸಬೇಡಿ’ ಎಂದು ಖಡಕ್ ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ಪರ ಕಾನೂನು ತಜ್ಞ ಅವಿಷ್ಕಾರ್ ಸಿಂಘ್ವಿ ವಾದ ಮಂಡಿಸಿದರು. ಅವರು ತೇಜಸ್ವಿ ಸೂರ್ಯ ಅವರ ಟ್ವೀಟ್ ರೈತರ ಆತ್ಮಹತ್ಯೆ ಬಗ್ಗೆ ನಕಲಿ ಸುದ್ದಿ ಹರಡಿದ್ದು ಸಾರ್ವಜನಿಕ ಜವಾಬ್ದಾರಿಯ ವಿರುದ್ಧವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆದರೆ, ಪೀಠ ಈ ಅಭಿಪ್ರಾಯವನ್ನು ಒಪ್ಪಿಕೊಳ್ಳದೆ, ಪ್ರಸ್ತುತ ಅರ್ಜಿ ವಿವಾದಾತ್ಮಕವಾಗಿದ್ದು, ನ್ಯಾಯಾಂಗ ವೀಕ್ಷಣೆಗೆ ಒಳಪಟ್ಟ ವಿಷಯವಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ. ಈ ತೀರ್ಪು ತೇಜಸ್ವಿ ಸೂರ್ಯಗೆ ರಾಜಕೀಯವಾಗಿ ರಿಲೀಫ್ ಒದಗಿಸಿರುವಂತಾಗಿದ್ದು, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದೆ.









