(ನ್ಯೂಸ್ ಕಡಬ) newskadaba.com ಜೂ. 27. ರಾಜ್ಯದ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ ಎಂಬಂತೆ ಹೆಚ್ಚುವರಿಯಾಗಿ 5ಕೆಜಿ ಅಕ್ಕಿ ಬದಲು ಆಹಾರದ ಕಿಟ್ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳ ಪ್ರಕಾರ ಈ ಬಗ್ಗೆ ಪ್ರಸ್ತಾವನೆ ಸಿದ್ಧವಾಗಿದ್ದು, ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ಸಿಗುತ್ತಿದ್ದು, ಅದು ಮಾರುಕಟ್ಟೆಗೆ ಹೋಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರದ ಕಿಟ್ ನಲ್ಲಿ ಸಕ್ಕರೆ, ಉಪ್ಪು, ತೊಗರಿಬೇಳೆ, ಕಾಫಿಪುಡಿ, ಟೀ ಪುಡಿ, ಅಡುಗೆ ಎಣ್ಣೆ, ಗೋಧಿ ಇರಲಿದೆ. ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದರೆ ಮಾತ್ರ ವಿತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ, ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಪಡಿತರ ಚೀಟಿದಾರರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ಸಿಗುತ್ತದೆ. ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ನೀಡುತ್ತದೆ. ರಾಜ್ಯ ಸರ್ಕಾರವು 5ಕೆ.ಜಿ ಅಕ್ಕಿ ನೀಡುತ್ತದೆ. ಎರಡೂ ಉಚಿತವಾಗಿ ಸಿಗುತ್ತವೆ.













