(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 26. ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ನಿರ್ಮಾಣಗೊಂಡ 2.1 ಕಿ.ಮೀ. ಉದ್ದದ ಕಲ್ಲಡ್ಕ ಫ್ಲೈಓವರ್ ನ ಎರಡೂ ಬದಿಯು ಇದೀಗ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.
ಜೂ. 02ರಂದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪ್ರಾರಂಭದಲ್ಲಿ ಮಾಣಿ ಭಾಗದಿಂದ ಬಿ.ಸಿ.ರೋಡು ಭಾಗಕ್ಕೆ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಧಿಕೃತ ಅವಕಾಶ ನೀಡಲಾಗಿತ್ತು, ಆದರೆ ಎರಡೂ ಭಾಗಕ್ಕೂ ಸಂಚರಿಸುವ ವಾಹನಗಳು ಒಂದೇ ಬದಿಯಿಂದ ಸಂಚರಿಸುತ್ತಿದ್ದವು.
ಇದೀಗ ಫ್ಲೈಓವರ್ ನ ಮಧ್ಯ ಭಾಗದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಆರಂಭ ಮತ್ತು ಅಂತ್ಯದಲ್ಲಿ ಡಿವೈಡರ್ ಮತ್ತು ತಡೆಗೋಡೆಗಳ ಕಾಮಗಾರಿ ಬಾಕಿ ಇದ್ದು, ವಾಹನ ಸಂಚಾರದ ಸಂದರ್ಭ ಎಚ್ಚರಿಕೆ ಅಗತ್ಯವಿದೆ.
ಬಿ.ಸಿ.ರೋಡು-ಅಡ್ಡಹೊಳೆ ಮಧ್ಯೆ ಸುಮಾರು 64 ಕಿ.ಮೀ.ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು 2 ಹಂತಗಳಲ್ಲಿ ನಡೆದಿದ್ದು, ಪೆರಿಯಶಾಂತಿ-ಅಡ್ಡಹೊಳೆ ಮಧ್ಯೆ ಸುಮಾರು 15 ಕಿ.ಮೀ.ಅಂತರದ ಕಾಮಗಾರಿ ಈಗಾಗಲೇ ಶೇ. 95 ಪೂರ್ಣಗೊಂಡು 400 ಮೀ.ನಷ್ಟು ಕಾಮಗಾರಿಗೆ ನ್ಯಾಯಾಲಯದ ತಡೆ ಇರುವುದರಿಂದ ಬಾಕಿಯಾಗಿದೆ.
ಪೆರಿಯಶಾಂತಿ-ಬಿ.ಸಿ.ರೋಡು ಮಧ್ಯದ ಕಾಮಗಾರಿಯಲ್ಲಿ ಕಲ್ಲಡ್ಕ ಫ್ಲೈಓವರ್ ಸೇರಿದಂತೆ ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಸುಬ್ರಹ್ಮಣ್ಯ ಕ್ರಾಸ್ ಎಲಿವೇಟೆಡ್ ರಸ್ತೆಗಳು ಸಂಚಾರಕ್ಕೆ ತೆರವುಗೊಂಡಿವೆ. ಪ್ರಸ್ತುತ ನೆಲ್ಯಾಡಿ ಎಲಿವೇಟೆಡ್ ರೋಡ್ ಕಾಮಗಾರಿ ಪ್ರಗತಿಯಲ್ಲಿದ್ದು, ಉಪ್ಪಿನಂಗಡಿಯ ವಳಾಲು ಬಳಿ ಟೋಲ್‌ಗೇಟ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ.









