ದಕ್ಷಿಣ ಕನ್ನಡದಲ್ಲಿ ಭೂಕುಸಿತದ ಆತಂಕ: 88 ಪ್ರದೇಶಗಳು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಣೆ!

(ನ್ಯೂಸ್‌ ಕಡಬ) newskadaba.com, ಜು.02: ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತದ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಒಟ್ಟು 88 ಪ್ರದೇಶಗಳನ್ನು ‘ಅತಿ ಹೆಚ್ಚು ಅಪಾಯದ ವಲಯ’ ಎಂದು ಘೋಷಿಸಿದೆ.ಬೆಳ್ತಂಗಡಿಯ ಚಾರ್ಮಾಡಿ ಘಾಟ್, ನೆರಿಯ, ಶಿಶಿಲ, ಮಂಗಳೂರಿನ ಕೆತ್ತಿಕಲ್ ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ ಮತ್ತು ಉಳ್ಳಾಲ ಭಾಗದ ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ.

ಐಐಟಿ ಧಾರವಾಡ ನಡೆಸಿದ ಕೃತಕ ಬುದ್ಧಿಮತ್ತೆ ಆಧಾರಿತ ವೈಜ್ಞಾನಿಕ ಅಧ್ಯಯನದ ಪ್ರಕಾರ, ಜಿಲ್ಲೆಯ ಶೇ. 24ಕ್ಕೂ ಹೆಚ್ಚು ಭೂಭಾಗ ಭೂಕುಸಿತದ ಅಪಾಯದಲ್ಲಿದೆ. ಅಕ್ರಮ ಗುಡ್ಡ ಕಟಾವು ಹಾಗೂ ಅವೈಜ್ಞಾನಿಕ ಭೂ ಅಭಿವೃದ್ಧಿಯೇ ಇದಕ್ಕೆ ಮುಖ್ಯ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.ಕಳೆದ 5 ವರ್ಷಗಳಲ್ಲಿ ಸಂಭವಿಸಿದ ಭೂಕುಸಿತಕ್ಕೆ ಜಿಲ್ಲೆಯಲ್ಲಿ 17 ಮಂದಿ ಬಲಿಯಾಗಿದ್ದು, ಪ್ರಸಕ್ತ ವರ್ಷದಲ್ಲೂ ಈಗಾಗಲೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ 115 ಪರಿಹಾರ ಕೇಂದ್ರಗಳನ್ನು ಸಜ್ಜುಗೊಳಿಸಿದೆ. ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳನ್ನು ನಿಯೋಜಿಸಲಾಗಿದೆ.ಅಪಾಯದ ವಲಯದಲ್ಲಿರುವ ಸಾರ್ವಜನಿಕರು ಅಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಗಳನ್ನು ಖಾಲಿ ಮಾಡಲು ಸೂಚಿಸಿದರೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಿ ಸಹಕರಿಸಬೇಕು ಎಂದು ವಿನಂತಿಸಲಾಗಿದೆ.

Scroll to Top