(ನ್ಯೂಸ್ ಕಡಬ) newskadaba.com ಜೂ. 20. ರಾಜ್ಯದಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಗಾಳಿ- ಮಳೆಗೆ ಅಲ್ಲಲ್ಲಿ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿ ಉಂಟಾಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳ ರೆಂಬೆ, ಕೊಂಬೆಗಳನ್ನು ಕತ್ತರಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್ ಬಳಿಯ ರಸ್ತೆ ಬದಿಯಲ್ಲಿ ಮರದ ಸುತ್ತಲೂ ಹಾಕಲಾಗಿದ್ದ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷಗಳ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ 29 ವರ್ಷದ ಅಕ್ಷಯ್ ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿದರು.
ಗಾಳಿ-ಮಳೆಗೆ ಟೊಳ್ಳು ಮರಗಳು ಮತ್ತು ಬೇರು ಕಚ್ಚದ ಮರಗಳು ಧರಾಶಾಯಿ ಆಗುತ್ತವೆ. ಇದಕ್ಕೆ ಕಾರಣ ಬೇರಿಗೆ ನೀರು ಇಳಿಯದಂತೆ ಹಾಕಲಾಗಿರುವ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವೂ ತೀರ್ಪು ನೀಡಿದ್ದು, ಸರ್ಕಾರ ಈ ಸಂಬಂಧ ಅಧಿಕೃತ ಆದೇಶವನ್ನೇ ಹೊರಡಿಸಿದೆ ಎಂದರು.
ಇದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿಶೇಷ ಆಯುಕ್ತರು ಮರದ ಸುತ್ತ ಇರುವ ಕಾಂಕ್ರೀಟ್ ತೆರವಿಗೆ ಆದೇಶ ಮಾಡಿದ್ದು, ಇನ್ನು ಮುಂದೆ ರಸ್ತೆ ಬದಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಮಣ್ಣು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಬಿಬಿಎಂಪಿ ಮತ್ತು ರಾಜ್ಯದ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳು ಮತ್ತು ಹೆದ್ದಾರಿ ಪ್ರಾಧಿಕಾರ, ತೋಟಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ತಾನು ಈಗಾಗಲೇ ನೆಟ್ಟಿರುವ ಗಿಡ ಮರಗಳ ಸುತ್ತ ಇರುವ ಕಾಂಕ್ರೀಟ್, ಡಾಂಬರು ತೆರವಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.













