ನಕಲಿ ನೋಟ್ ಮುದ್ರಣ- ಉದ್ಯಮಿ ಪುತ್ರನ ಬಂಧನ

crime, arrest, suspected

(ನ್ಯೂಸ್ ಕಡಬ) newskadaba.com ಜೂ. 14. ಶೋಕಿ ಜೀವನಕ್ಕಾಗಿ ಹಣ ಹೊಂದಿಸಲು ಖೋಟಾ ನೋಟು ತಯಾರಿಸಿದ ಟೆಕ್ಸ್‌ ಟೈಲ್ ಉದ್ಯಮಿಯೊಬ್ಬರ ಪುತ್ರನನ್ನು ಕಮರ್ಷಿಯಲ್‌ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಕುರಿತು ವರದಿಯಾಗಿದೆ.

ಬಂಧಿತನನ್ನು ಕ್ರಿಷ್‌ಮಾಲಿ (23) ಎಂದು ಗುರುತಿಸಲಾಗಿದೆ. ಈತ ವಿನಾಕಾರಣ ಸುತ್ತಾಡುತ್ತಾ ದುಂದುವೆಚ್ಚ ಮಾಡುತ್ತಿದ್ದರಿಂದ ಮನೆಯಲ್ಲಿ ಖರ್ಚಿಗೆ ಹಣ ಕೊಡುತ್ತಿರಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಹಣ ಹೊಂದಿಸಬೇಕೆಂದು ಯೋಚಿಸುತ್ತಿದ್ದಾಗ ಆತನಿಗೆ ನಕಲಿ ನೋಟು ತಯಾರಿಸುವ ದುರಾಲೋಚನೆ ಹೊಳೆದಿದ್ದು, ಅದಕ್ಕಾಗಿ ಆತ ಪ್ರಿಂಟರ್ ಸ್ಕ್ಯಾನ‌ರ್ ಹಾಗೂ ಪೇಪರ್‌ಗಳನ್ನು ಖರೀದಿಸಿದ್ದಾನೆ.

ನಕಲಿ ನೋಟನ್ನು ಯಾವ ಜಾಗದಲ್ಲಿ ತಯಾರಿಸಬಹುದೆಂದು ಆಲೋಚಿಸಿದ ಈತ ಆನ್‌ಲೈನ್ ಮೂಲಕ ಹೋಟೇಲ್ ಒಂದರಲ್ಲಿ ರೂಂ ಬುಕ್ ಮಾಡಿ, ಜೂ.4 ರಂದು ರೂಂ ಬಾಡಿಗೆಗೆ ಪಡೆದುಕೊಂಡು, ಅಲ್ಲಿ 500 ರೂ.ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡಿದ್ದಾನೆ. ಈ ವೇಳೆ ಹಾಳಾದ ನೋಟುಗಳನ್ನು ರೂಂ ನಲ್ಲಿದ್ದ ಕಸದ ಬುಟ್ಟಿಗೆ ಹಾಕಿ, ಜೂ.7 ರಂದು ರೂಂ ಖಾಲಿ ಮಾಡುವಾಗ 500 ರೂ. ಮುಖಬೆಲೆಯ 6 ನಕಲಿ ನೋಟುಗಳನ್ನು (3000) ಮ್ಯಾನೇಜರ್‌ಗೆ ನೀಡಿ ತೆರಳಿದ್ದಾನೆ. ಇತ್ತ ಹೋಟೇಲ್ ಮ್ಯಾನೇಜರ್ ಸಂಗ್ರಹವಾಗಿದ್ದ ಹಣವನ್ನು ಬ್ಯಾಂಕಿಗೆ ಕಟ್ಟಲು ಹೋದಾಗ 6 ನೋಟುಗಳನ್ನು ಖೋಟಾ ನೋಟುಗಳೆಂದು ಬ್ಯಾಂಕ್‌ನವರು ವಾಪಸ್ ಕೊಟ್ಟಿದ್ದು, ಇದೇ ವೇಳೆ ಹೋಟೇಲ್ ರೂಂ ಬಾಯ್ ಕಸದ ಬುಟ್ಟಿಯಲ್ಲಿದ್ದ ಖೋಟಾ ನೋಟಿನ ಚೂರುಗಳನ್ನು ತಂದು ಮ್ಯಾನೇಜರ್‌ಗೆ ತೋರಿಸಿದ್ದಾನೆ. ಆ ರೂಂ ನಲ್ಲಿ ಯಾರು ಉಳಿದುಕೊಂಡಿದ್ದರು ಎಂಬ ಬಗ್ಗೆ ದಾಖಲೆ ಪರಿಶೀಲಿಸಿದಾಗ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಉದ್ಯಮಿ ಪುತ್ರನ ಆಧಾರ್‌ಕಾರ್ಡ್ ಲಭ್ಯವಾಗಿದ್ದು, ತಕ್ಷಣವೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

error: Content is protected !!
Scroll to Top