(ನ್ಯೂಸ್ ಕಡಬ) newskadaba.com, ಜೂ.05. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದೆ. ಇಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 47 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವ ವಯಸ್ಸಿನವರು. ನಾವು ಮೃತಪಟ್ಟವರ ಕುಟುಂಬದವರ ವಾರೀಸುದಾರರಿಗೆ ರೂ.10 ಲಕ್ಷ ಪರಿಹಾರವಾಗಿ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ದುರಂತದ ಕುರಿತು ತುರ್ತುಗೋಷ್ಟಿ ನಡೆಸಿದ ಸಿಎಂ, ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದೇವೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 15 ದಿನಗಳ ಒಳಗಾಗಿ ತನಿಖೆಯ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು.
ನಿನ್ನೆ ತಡರಾತ್ರಿವರೆಗೂ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಕ್ರಿಕೆಟ್ ಅಸೋಸಿಯೇಶನ್ ಅವರು ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸರ್ಕಾರದ ವತಿಯಿಂದಲೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು ಎಂದು ಸರ್ಕಾರ ಇದಕ್ಕಾಗಿ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದರು.