(ನ್ಯೂಸ್ ಕಡಬ) newskadaba.com ಅ. 16. ಬ್ಯಾಂಕ್ ಸಾಲ ಸಂಪೂರ್ಣ ಕಟ್ಟಿ ಮನೆ ಉಳಿಸಿಕೊಡುವ ಮೂಲಕ ಬೀದಿಪಾಲಾಗುತ್ತಿದ್ದ ಕುಟುಂಬವನ್ನು ರಕ್ಷಿಸಿ ಲುಲು ಗ್ರೂಪ್ ಮಾಲೀಕ, ಉದ್ಯಮಿ ಯೂಸುಫ್ ಅಲಿ ಮಾನವೀಯತೆ ಮೆರೆದಿರುವ ಕುರಿತು ವರದಿಯಾಗಿದೆ.
ಕೇರಳದ ಉತ್ತರ ಪರವೂರ್ ನ ಮಡಪ್ಲತುರಥ್ ಎಂಬಲ್ಲಿ ಸ್ಥಳೀಯ ನಿವಾಸಿ ಸಂಧ್ಯಾ ಮತ್ತು ಪತಿ 2019ರಲ್ಲಿ ಮನೆ ಕಟ್ಟಲು ಮಣಪ್ಪುರಂ ಹಣಕಾಸು ಸಂಸ್ಥೆಯಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. 4.8 ಸೆಂಟ್ ಜಾಗದಲ್ಲಿ ಮನೆ ಕಟ್ಟಿಕೊಂಡು ಕುಟುಂಬ ಜೀವನ ನಡೆಸುತ್ತಿತ್ತು. ಪತ್ನಿ ಸಂಧ್ಯಾ ಹೆಸರನಲ್ಲಿ ಸಾಲ ಮಾಡಲಾಗಿದ್ದು, 2021ರಲ್ಲಿ ಪತಿ ತೀರಿಕೊಂಡಿದ್ದರು. ಇದರಿಂದ ಇಬ್ಬರು ಮಕ್ಕಳನ್ನು ಸಾಕುವ ಜೊತೆಗೆ ಸಾಲ ತೀರಿಸುವ ಹೊಣೆ ಸಂಧ್ಯಾಳ ಮೇಲೆ ಬಿತ್ತು. ಅಸಲು ಮತ್ತು ಸಾಲ ಸೇರಿ 8 ಲಕ್ಷ ರೂ. ಪಾವತಿಸಬೇಕಿತ್ತು. ಆದರೆ ಫೈನಾನ್ಸ್ ಹಲವಾರು ಬಾರಿ ನೋಟಿಸ್ ನೀಡಿದರೂ ಕಂತು ಕಟ್ಟಲಾಗದೇ ಸಂಧ್ಯಾ ಪರದಾಡಿದ್ದರು. ಸಂಧ್ಯಾ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಕೊನೆಗೆ ಮಣಪ್ಪುರಂ ಫೈನಾನ್ಸ್ ಸೋಮವಾರದಂದು ಸಂಧ್ಯಾ ಕುಟುಂಬವನ್ನು ಮನೆಯಿಂದ ಹೊರಹಾಕಿ ಮನೆ ಜಫ್ತಿ ಮಾಡಿದ್ದರು. ಈ ಘಟನೆಯನ್ನು ಸ್ಥಳೀಯ ಮಾಧ್ಯಮಗಳ ವರದಿಗಳಿಂದ ತಿಳಿದ ಉದ್ಯಮಿ ಮೊಹಮದ್ ಯೂಸುಫ್ ಅಲಿ ಕೂಡಲೇ ತಮ್ಮ ತಂಡವನ್ನು ಕಳುಹಿಸಿ ಸಂಧ್ಯಾರಿಗೆ ನೆರವು ನೀಡಲು ಸೂಚಿಸಿದರು. ಮನೆಯ ಸಾಲವನ್ನು ಒಂದೇ ಕಂತಿನಲ್ಲಿ ಪಾವತಿಸಿದ್ದೂ ಅಲ್ಲದೇ ಕುಟುಂಬದ ನಿರ್ವಹಣೆಗಾಗಿ ಸ್ವಂತ ಕಾಲ ಮೇಲೆ ನಿಲ್ಲಲು 10 ಲಕ್ಷ ರೂ.ವನ್ನು ಸಂಧ್ಯಾಳ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಠೇವಣಿ ಇರಿಸಿ ಮುಂದಿನ ಜೀವನ ಸುಗಮವಾಗಿ ನಡೆಸಲು ಅನುಕೂಲ ಮಾಡಿಕೊಟ್ಟರು.