(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಯುವಜನರ ಮೇಲೆ ಪರಿಣಾಮ ಬೀರುತ್ತಿದ್ದು, ಪ್ರಮುಖವಾಗಿ ಹದಿಹರೆಯದ ಮಕ್ಕಳು ಹಾಗೂ ಅಪ್ರಾಪ್ತರ ಬದುಕಿನಲ್ಲಿ ಅಡ್ಡ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆ ಇನ್ಸ್ಟಾಗ್ರಾಮ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರತ್ಯೇಕ ಖಾತೆಯನ್ನು ನಿಗದಿ ಮಾಡಿ, ಹಲವು ನಿಬಂಧನೆಗಳನ್ನು ವಿಧಿಸಿರುವುದಾಗಿ ವರದಿಯಾಗಿದೆ.
ಅಮೆರಿಕ, ಇಂಗ್ಲೆಂಡ್ , ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಗಳವಾರದಿಂದ ಇದು ಜಾರಿಗೆ ಬಂದಿದ್ದು, ಇನ್ಸ್ಟಾಗ್ರಾಮ್ ಬಳಕೆ ಮಾಡುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇನ್ನೂ ಟೀನೇಜ್ ಅಕೌಂಟ್ ನಲ್ಲಿ ಉಳಿದುಕೊಳ್ಳಲಿದ್ದಾರೆ. ಅದೇ ರೀತಿ ಅದಾಗಲೇ ಖಾತೆ ಆರಂಭಿಸಿದ್ದ ಅಸ್ತಿತ್ವದಲ್ಲಿರುವ ಖಾತೆಗಳೂ ಟೀನೇಜ್ ಮೋಡ್ ಗೆ ಕನ್ವರ್ಟ್ ಆಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಅಪ್ರಾಪ್ತ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳಬಹುದು ಎಂದು ಮೆಟಾ ಒಪ್ಪಿಕೊಂಡಿದೆ. ವಯಸ್ಕರ ಜನ್ಮದಿನದೊಂದಿಗೆ ಹೊಸ ಖಾತೆಯನ್ನು ರಚಿಸಲು ಪ್ರಯತ್ನಿಸಿದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರ ವಯಸ್ಸಿನ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದೆ. ಇದೇ ತಪ್ಪು ಮಾಹಿತಿಯನ್ನು ಪತ್ತೆ ಹಚ್ಚಲು ಹೊಸ ತಂತ್ರಾಂಶವನ್ನೂ ಕಂಡು ಹಿಡಿಯುವುದಾಗಿಯೂ ಹೇಳಿದ್ದಾರೆ.
ಟೀನೇಜ್ ಅಕೌಂಟ್ನಲ್ಲಿ ಅನೇಕ ಸೆಟ್ಟಿಂಗ್ಗಳನ್ನು ಬದಲಾಯಿಸಲು ಪೋಷಕರ ಅನುಮತಿ ಪಡೆಯಬೇಕಾಗುತ್ತದೆ. ಯುವ ಬಳಕೆದಾರರು ಮೆಸೇಜಿಂಗ್ ವಿಚಾರದಲ್ಲಿ ನಿರ್ಬಂಧಿತ ಸೆಟ್ಟಿಂಗ್ ಹೊಂದಿರುತ್ತಾರೆ. ಪ್ರತಿದಿನ ಒಂದು ಗಂಟೆ ಇನ್ಸ್ಟಾಗ್ರಾಮ್ ಬಳಸಿದ ಬಳಿಕ ಅಪ್ಲಿಕೇಷನ್ ಕ್ಲೋಸ್ ಮಾಡಲು ಅದು ಪ್ರಾಂಪ್ಟ್ ಕಳುಹಿಸುತ್ತದೆ ಎನ್ನಲಾಗಿದೆ.