(ನ್ಯೂಸ್ ಕಡಬ)newskadaba.com ಮುಂಬೈ, ಜು.25. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಭಾರಿ ಮಳೆಯ ಪರಿಣಾಮ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿಯನ್ನು ತಡೆಯುವುದಕ್ಕೆ ಆಲಮಟ್ಟಿ ಜಲಾಯಶಯದಿಂದ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ. ಈ ಬಗ್ಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ (ಆಲಮಟ್ಟಿ ಡ್ಯಾಮ್) ಕೃಷ್ಣಾ ನದಿಗೆ ಕಟ್ಟಲಾಗಿರುವ ಜಲಾಶಯವಾಗಿದ್ದು, ಜಲವಿದ್ಯುತ್ ಯೋಜನೆಯದ್ದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, ‘ಆಲಮಟ್ಟಿ ಅಣೆಕಟ್ಟಿನಿಂದ ನೀರು ಹರಿಸುವುದನ್ನು ಪ್ರಸ್ತುತ 2.5 ಲಕ್ಷ ಕ್ಯೂಸೆಕ್‌ನಿಂದ ಮೂರು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸುವಂತೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕವನ್ನು ಕೇಳಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನ ನೀರಿನ ಸಂಗ್ರಹವು ಅತಿ ಕಡಿಮೆ ಅವಧಿಯಲ್ಲಿ ಆರು ಸಾವಿರ ಮಿಲಿಯನ್ ಘನ ಅಡಿಗಳಷ್ಟು (ಟಿಎಂಸಿ) ಹೆಚ್ಚಾಗಿದೆ ಮತ್ತು ಈಗಾಗಲೇ ಅದು ಶೇ 75 ರಷ್ಟು ತುಂಬಿದೆ. ಇದರರ್ಥ ಕೊಯ್ನಾ ಅಣೆಕಟ್ಟಿನಿಂದ ನೀರು ಬಿಡಬೇಕು, ಇದರಿಂದ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.