(ನ್ಯೂಸ್ ಕಡಬ)newskadaba.com ನವದೆಹಲಿ, ಜು.22. ಫೋನ್ ಪೇ ಸಿಇಒ ಸಮೀರ್ ನಿಗಮ್ ಕ್ಷಮೆಯಾಚಿಸುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ತಲೆಬಾಗಿದ್ದು, “ನನ್ನ ಉದ್ದೇಶ ಕರ್ನಾಟಕ ಅಥವಾ ಕನ್ನಡಿಗರನ್ನು ಅವಮಾನಿಸುವುದಲ್ಲ. ನನ್ನ ಮಾತು ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎನ್ನುವ ಮೂಲಕ ಕರುನಾಡಿನ ಜನರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ವರದಿ ಪ್ರಕಟಣೆ ತಿಳಿಸಿದೆ. ಅನೇಕ ಕನ್ನಡಿಗರು ಫೋನ್ ಪೇ ಆ್ಯಪ್ ಅನ್ನು ಅನ್ಇನ್ಸ್ಟಾ ಲ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿ ಬಾಯ್ಕಟ್ ಅಭಿಯಾನ ಆರಂಭವಾಗಿದ್ದೇ ತಡ ಇದೀಗ ಟ್ವೀಟ್ ಮೂಲಕ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ ಸರ್ಕಾರ ಖಾಸಗಿ ಉದ್ಯೋಗ ಕೋಟಾ ಮಸೂದೆಯನ್ನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದು, ನಂತರ ಮತ್ತಷ್ಟು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಾತ್ಕಲಿಕವಾಗಿ ಸ್ಥಗಿತಗೊಳಿಸಿತ್ತು.
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದ ಸಮೀರ್ ನಿಗಮ್, ಭಾರತದಾತ್ಯಂತ 25,000ಕ್ಕೂ ಅಧಿಕ ಉದ್ಯೋಗಗಳನ್ನು ನಾನು ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಯ ವಿರುದ್ಧ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಎನ್ನಲಾಗಿದೆ.