(ನ್ಯೂಸ್ ಕಡಬ) newskadaba.com ದೆಹಲಿ ಫೆ. 24: ಎರಡು ದಿನಗಳಿಂದ ತಣ್ಣಗಾಗಿದ್ದ ದೆಹಲಿ ಚಲೋ ಇಂದಿನಿಂದ ಮತ್ತೆ ವೇಗ ಪಡೆದುಕೊಳ್ಳಲಿದೆ. ಅನ್ನದಾತರ ಆಕ್ರೋಶದ ಕಿಡಿ, ಜ್ವಾಲೆಯಾಗಿ ರಾಷ್ಟ್ರ ರಾಜಧಾನಿಗೆ ಸಂಕಷ್ಟ ಉಂಟುಮಾಡದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.. ಈ ಮಧ್ಯೆ ಹರಿಯಾಣದಲ್ಲಿ ನಡೆದ ಸಂಘರ್ಷ ಪ್ರತಿಭಟನೆಯ ಸ್ವರೂಪವನ್ನೇ ಬದಲಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ನದಾತರು ಹೊತ್ತಿಸಿದ್ದ ಪ್ರತಿಭಟನೆ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಕಳೆದ ಫೆಬ್ರವರಿ 21 ರಂದು ನಡೆದ ಸಂಘರ್ಷದಲ್ಲಿ ಯುವ ರೈತ ಸಾವನ್ನಪ್ಪಿದ ಘಟನೆಯೂ ನಡೆದು ಹೋಗಿತ್ತು. ಈ ಬೆನ್ನಲ್ಲೇ ಪ್ರತಿಭಟನೆಯ ಕಿಚ್ಚಿಗೆ ಶಾಂತಿಯ ನೀರೆರೆದಿದ್ದ ಅನ್ನದಾತರು, ಇಂದಿನಿಂದ ಮತ್ತೆ ಹೋರಾಟದ ಕಹಳೆ ಮೊಳಗಿಸಲಿದ್ದಾರೆ. ಹರಿಯಾಣ ಮತ್ತು ಪಂಜಾಬ್ ಗಡಿ ಭಾಗದಲ್ಲಿ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಹರಿಯಾಣ ಸರ್ಕಾರ ಯಾವುದೇ ತಪ್ಪು ಸಂದೇಶ ರವಾನೆ ಆಗಬಾರದು ಎಂಬ ಹಿನ್ನಲೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಳಿಸಿದೆ. ಜೊತೆಗೆ 15 ಜಿಲ್ಲೆಗಳಲ್ಲಿ 144 ಸೆಕ್ಷನ್ ಸಹ ವಿಧಿಸಲಾಗಿದೆ.