ದುಬೈ: ರಸ್ತೆ ಅಪಘಾತ- ಮಂಗಳೂರಿನ ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 23. ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವತಿ ಮೃತಪಟ್ಟ ಘಟನೆ ನಡೆದಿದೆ.


ಮೃತ ಯುವತಿಯನ್ನು ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಎಂದು ಗುರುತಿಸಲಾಗಿದೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ದುಬೈಗೆ ತೆರಳಿ ಎಕ್ಸ್‌ಕ್ಯೂ ಜೆಟ್‍ನಲ್ಲಿ ಅಧಿಕಾರಿಯಾಗಿ ಕಳೆದ ಐದು ವರುಷಗಳಿಂದ ಕಾರ್ಯನಿರ್ವಹಿಸಿದ್ದರು. ಪ್ರತೀ ದಿನ ಕಂಪೆನಿಯ ಕ್ಯಾಬ್‍ನಲ್ಲಿ ಸಂಚರಿಸುತ್ತಿದ್ದ ವಿದಿಶಾ ಗುರುವಾರದಂದು ತಡವಾಯಿತು ಎಂದು ಹೇಳಿ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆನ್ನಲಾಗಿದೆ. ಅಪಘಾತದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Scroll to Top