ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕಡಿದು ಕೊಲೆಗೆ ಯತ್ನಿಸಿದ ಭೂಪ ► ಪ್ರೀತಿಯನ್ನು ಉಳಿಸಲು ಮದುವೆಗೂ ಮೊದಲೇ ನಡೆದಿತ್ತು ತಲವಾರು ಕಾರುಬಾರು

(ನ್ಯೂಸ್ ಕಡಬ) newskadaba.com ಕಾರ್ಕಳ, ಫೆ.01. ಕಳೆದ ಒಂದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕಡಿದು ಕೊಲೆಗೆ ಪ್ರಯತ್ನಿಸಿದ ಘಟನೆ ಹೆರ್ಮುಂಡೆಯ ಕುಕ್ಕುದಡಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವತಿಯನ್ನು ಹೆರ್ಮುಂಡೆ ಕರ್‍ಜಿಪಲ್ಕೆ ನಿವಾಸಿ ಶ್ರೀಧರ್ ಪೂಜಾರಿ ಮತ್ತು ಸುಗುಣ ಪೂಜಾರಿ ದಂಪತಿಗಳ ಅನುಶ್ರೀ (23) ಎಂದು ಗುರುತಿಸಲಾಗಿದ್ದು, ಘಟನೆಯಿಂದ ತನ್ನ ಎರಡು ಕೈಗಳು ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಜೀವನ್ಮರಣ ಸ್ಥಿತಿಯಲ್ಲಿರುವ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಲಾಗಿದೆ. ಆಕೆಯ ಪತಿ ಹೆರ್ಮುಂಡೆಯ ಪಟ್ರಬೆಟ್ಟು ಭೋಜ ಪೂಜಾರಿ ಹಾಗೂ ಜಯಂತಿ ದಂಪತಿಗಳ ಮಗ ಸಂತೋಷ್ ಪೂಜಾರಿ( 27) ಪ್ರಕರಣದ ಆರೋಪಿ.

ಮುಂಬೈನ ಲಾಡ್ಜ್‌ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿರುವ ಸಂತೋಷ್  ಇಂಜಿನಿಯರ್ ಪದವೀಧರೆ ಅನುಶ್ರೀಯನ್ನು ಪ್ರೀತಿಸಿದ್ದು, ಈ ನಡುವೆ ಆಕೆಗೆ ಆತನ ಬಗ್ಗೆ ಇಷ್ಟ ಇರಲಿಲ್ಲ ಎಂಬ ವಿಚಾರ ತಿಳಿದ ಸಂತೋಷ್ ಪೂಜಾರಿ ಅದೊಂದು ದಿನ ರಾತ್ರಿ ಆಕೆಯ ಮನೆಗೆ ಹೋಗಿ ತಲವಾರು ಝಳಪಿಸುತ್ತಾ ಮನೆಯೊಳಗೆ ಅಕ್ರಮ ಪ್ರವೇಶಗೈದು, ಆಕೆಯನ್ನು ನನ್ನೊಂದಿಗೆ ವಿವಾಹ ಮಾಡಿ ಕೊಡದೇ ಹೋದಲ್ಲಿ ನಿಮ್ಮನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆ ಘಟನಾವಳಿಯಿಂದ ಹೆದರಿ ಮಾನಸಿಕವಾಗಿ ನೊಂದಿದ್ದ ಮನೆ ಮಂದಿ ಅನುಶ್ರೀಯಳನ್ನು ಧಾರೆ ಎರೆದು ಕೊಡುವ ವಾಗ್ದಾನ ನೀಡಿ 2017 ಮಾರ್ಚ್ 23 ರಂದು ಅನುಶ್ರೀಯ ಅಜ್ಜಿಯ ಮನೆಯಲ್ಲಿಯೇ ಶಾಸ್ತೋಕ್ತವಾಗಿ ಅನುಶ್ರೀ ಮತ್ತು ಸಂತೋಷ್ ಪೂಜಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ನಡುವೆ ಸಂತೋಷ್ ಪೂಜಾರಿ ಪತ್ನಿ ಅನುಶ್ರೀಯನ್ನು ತವರು ಮನೆಯಲ್ಲಿಯೇ ಬಿಟ್ಟು ಮುಂಬಯಿಗೆತೆರಳಿದ್ದನು. ಡಿಪ್ಲೋಮಾ ಇಂಜಿನಿಯರ್ ಆಗಿರುವ ಅನುಶ್ರೀ ಉದ್ಯೋಗ ಅರಸಿಕೊಂಡು ಮತ್ತೇ ಬೆಂಗಳೂರಿಗೆ ತೆರಳಿ ಕೆಲ ತಿಂಗಳು ಅಲ್ಲಿ ಕೆಲಸ ಮಾಡಿಕೊಂಡು ಇದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಊರಿಗೆ ಕರೆಸಿಕೊಂಡಿದ್ದ ಪತಿ ಸಂತೋಷ್ ಪೂಜಾರಿ ಅಲ್ಲಂದ ಮುಂಬಯಿಗೆ ಕರೆದುಕೊಂಡು ಹೋಗಿದ್ದನು.

Also Read  ನಾಪತ್ತೆಯಾಗಿದ್ದ ಮಹಿಳೆ ಪತ್ತೆ..! 5 ವರ್ಷದ ಬಳಿಕ ಒಂದಾದ ತಾಯಿ-ಮಕ್ಕಳು

ಅವರಿಬ್ಬರ ನಡುವೆ ದಾಂಪತ್ಯ ಬಿರುಕು ಮೂಡುತ್ತಿದ್ದಂತೆ ಅನುಶ್ರೀಯ ತಾಯಿ ಸುಗುಣ ಪೂಜಾರಿ ಮುಂಬಯಿಗೆ ತೆರಳಿ ಮಗಳ ದಾಂಪತ್ಯ ಬಂಧನ ಗಟ್ಟಿಗೊಳಿಸಲು ಮುಂದಾಗಿದ್ದರು. ಆದರೆ ಅವರಿಬ್ಬರ ನಡುವೆ ಬಾಂಧವ್ಯ ವೃದ್ಧಿಸದೆ ಹೋದುದರಿಂದ ಅನುಶ್ರೀ ತನ್ನ ತಾಯಿಯೊಂದಿಗೆ ಊರಿಗೆ ಹಿಂತಿರುಗಿ ತವರು ಮನೆ ಸೇರಿದಳು. 2018ರ ಜನವರಿ 27 ಶನಿವಾರ ಸಂಜೆ 5.45 ರ ವೇಳೆಗೆ ಅನುಶ್ರೀ ಕಾರ್ಕಳದಿಂದ ತೆಳ್ಳಾರಿಗೆ ಆಗಮಿಸಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಆರೋಪಿ ಪತಿ ಸಂತೋಷ್ ಪೂಜಾರಿ ಏಕಾಏಕಿಯಾಗಿ ಮೇಲೇರಗಿದ್ದಾನೆ. ಬಿಡಿಸಿಕೊಳ್ಳಲು ಅನುಶ್ರೀ ಮುಂದಾದಾಗ ಅದಕ್ಕೆ ಅವಕಾಶ ನೀಡದೇ ಇದ್ದ ಆರೋಪಿ ತನ್ನಲ್ಲಿದ್ದ ಕತ್ತಿಯಿಂದ ಆಕೆಯ ಎರಡು ಕೈಗಳನ್ನು ಹಾಗೂ ಎರಡು ಕಾಲುಗಳನ್ನು ಕಡಿದು ಹಾಕಿದ್ದಾನೆ. ವಿವಾಹ ವಿಚ್ಚೇದನೆ ನೀಡುವ ಬದಲಾಗಿ ನಿನ್ನನ್ನೇ ಯಮಲೋಕಕ್ಕೆ ಕಳುಹಿಸುತ್ತಿದ್ದೇನೆ ಎಂದು ಪತಿ ಸಂತೋಷ್ ಪೂಜಾರಿ ಕಿರುಚಾಡಿಕೊಂಡಿರುವ ವಿಚಾರವನ್ನು ಜೀವನ್ಮರಣ ಸ್ಥಿತಿಯಲ್ಲಿರುವ ಅನುಶ್ರೀ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

error: Content is protected !!
Scroll to Top