(ನ್ಯೂಸ್ ಕಡಬ) newskadaba.com ಸ್ಯಾನ್ ಫ್ರಾನ್ಸಿಸ್ಕೋ, ಜು. 24. ಟ್ವಿಟ್ಟರ್ ಮಾಲೀಕತ್ವ ವಹಿಸಿಕೊಂಡ ಎಲಾನ್ ಮಸ್ಕ್ ಇದೀಗ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದಾರೆ. ಈ ಕುರಿತು ಎರಡು ದಿನಗಳ ಹಿಂದೆಯಷ್ಟೇ ಟ್ವಿಟ್ಟರ್ ಲೋಗೊ ಹಾಗೂ ಅದರ ಹೆಸರನ್ನು ಬದಲಾಯಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಸದ್ಯ ಅದು ನಿಜವಾಗಿದ್ದು, ಹಕ್ಕಿಯನ್ನು ಹಾರಿ ಬಿಟ್ಟು ಆ ಜಾಗಕ್ಕೆ ಎಕ್ಸ್ ಚಿಹ್ನೆ ಬಂದಿದೆ.
ಟ್ವಿಟ್ಟರ್ ಕಂಪನಿಯ ಮಾಲೀಕ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ, ಸ್ಪೇಸ್ ಎಕ್ಸ್ ಸಂಸ್ಥಾಪಕನೂ ಆದ ಎಲಾನ್ ಮಸ್ಕ್ ಅವರೇ ಈ ಬಗ್ಗೆ ಕೆಲ ದಿನಗಳ ಹಿಂದೆ ಸುಳಿವು ನೀಡಿದ್ದು, ಶೀಘ್ರದಲ್ಲೇ ಟ್ವೀಟರ್ ಬ್ರ್ಯಾಂಡ್ ಬಳಿಕ ಹಂತಹಂತವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳುತ್ತೇವೆ ಎಂದು ಟ್ವೀಟ್ ಮಾಡಿದ್ದರು.
ಎಲಾನ್ ಮಸ್ಕ್ 2022ರ ಅಕ್ಟೋಬರ್ನಲ್ಲಿ ಟ್ವೀಟರ್ ಕಂಪನಿಯನ್ನು ಖರೀದಿಸಿದ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಿದ್ದರು. ಇದರಿಂದಾಗಿ ಬಹುತೇಕ ವಿವಾದದ ಅಲೆ ಎಬ್ಬಿಸಿದ್ದೂ ಉಂಟು. ಇತ್ತ ಟ್ವಿಟ್ಟರ್ ಲೋಗೋ ಬದಲಾಗುತ್ತಿದ್ದಂತೆಯೇ ಟ್ವಿಟ್ಟರ್ನಲ್ಲಿ ಹಲವು ಮೀಮ್ಸ್ಗಳು ಸೃಷ್ಟಿಯಾಗಿದ್ದು, ಅನೇಕರು ಟ್ವಿಟ್ಟರ್ನ ಹಕ್ಕಿಗೆ ಭಾವುಕ ವಿದಾಯ ಸಲ್ಲಿಸಿದ್ದಾರೆ. ಟ್ವಿಟ್ಟರ್ ಲೋಗೋ twitterX ಈಗ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಹಕ್ಕಿಯೊಂದು ನನ್ನನ್ನು ಕೆಲಸದಿಂದ ತೆಗೆದ್ರು ಅಂತ ಅಳುತ್ತಿರುವ ಫೋಟೋ ಹಾಕಿ ಗುಡ್ ಬಾಯ್ ಎಂದು ಹೇಳುತ್ತಿರುವ ಮೀಮ್ಸ್ ಈಗ ವೈರಲ್ ಆಗಿದೆ.