(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 06. ಇಲ್ಲಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಬಾಂಬ್ ಪತ್ತೆ, ಶ್ವಾನ ದಳ ದೌಡಾಯಿಸಿದ್ದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯಲ್ಲಿನ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿರುವುದಾಗಿ ತಿಳಿದುಬಂದಿದೆ.

ಬೆಂಗಳೂರಿನ ರಾಜಾಜಿನಗರದ ಎನ್.ಪಿ.ಎಸ್ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು, ಇದರಿಂದ ಆತಂಕಗೊಂಡ ಶಾಲಾ ಆಡಳಿತ ಮಂಡಳಿ ಕೂಡಲೇ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಾಲಾ ಆವರಣದಲ್ಲಿ 4 ಜಿಲೆಟಿನ್ ಕಡ್ಡಿ ಇಟ್ಟಿರುವುದಾಗಿ ಇ-ಮೇಲ್ ಬಂದಿದ್ದು, ಬೆಳಗ್ಗೆ 11.30 ಮೇಲ್ ನೋಡಿದ ಶಾಲಾ ಸಿಬ್ಬಂದಿ, ತಕ್ಷಣ ಬಸವೇಶ್ವರನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.














