(ನ್ಯೂಸ್ ಕಡಬ) newskadaba.com ಲಖನೌ, ಜ. 05. ದೆಹಲಿಯಲ್ಲಿ ಹೊಸ ವರ್ಷದ ಆಚರಣೆಯ ಆಸುಪಾಸಿನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಪ್ರಕರಣ ಮಾಸುವ ಮುನ್ನವೇ ಅಂಥಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬಲೇನೋ ಕಾರುವೊಂದು 20 ವರ್ಷದ ಯುವತಿಯ ಸ್ಕೂಟಿಗೆ ಢಿಕ್ಕಿ ಹೊಡೆದು ಆಕೆಯನ್ನು 12 ಕಿ.ಮೀ ಎಳೆದೊಯ್ದಿತ್ತು. ಈಗ ಉತ್ತರ ಪ್ರದೇಶದ ಬಾಂದದಲ್ಲಿ ಟ್ರಕ್ ಒಂದು ಸ್ಕೂಟಿಗೆ ಢಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ ವರೆಗೂ ಎಳೆದೊಯ್ದಿದೆ ಎನ್ನಲಾಗಿದೆ.
ಬಾಂದಾ ಜಿಲ್ಲೆಯ ಮಾವಿ ಬುಜುರ್ಗ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಟ್ರಕ್ ಚಾಸಿಸ್ ಗೆ ಮಹಿಳೆಯ ದೇಹ ಸಿಲುಕಿಕೊಂಡಿದ್ದು ಬಳಿಕ ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿದೆ, ಸಂತ್ರಸ್ತೆಯ ಸ್ಕೂಟಿ ಸುಟ್ಟುಹೋಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮಹಿಳೆಯ ಮೃತದೇಹವನ್ನು ಟ್ರಕ್ ನಿಂದ ಹೊರತೆಗೆದರು ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ವಿವಿಯೊಂದರ ಪಿಆರ್ ಒ ಬಿಕೆ ಗುಪ್ತ, ಮೃತ ಮಹಿಳೆಯನ್ನು ಪುಷ್ಪ ಎಂದು ಗುರುತಿಸಿದ್ದು, ವಿವಿಯಲ್ಲಿ ಆಕೆ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದ್ದಾರೆ. ಆಕೆ ಮನೆಗೆ ಅಗತ್ಯವಿರುವ ಪದಾರ್ಥಗಳನ್ನು ತರಲು ಹಾಗೂ ಪೆಟ್ರೋಲ್ ತುಂಬಿಸಿಕೊಂಡು ಬರಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದರು.