ಮಂಗಳೂರು: ಬೆಂಗಳೂರು ಮೂಲದ ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ ➤ ಕಾರಣ ನಿಗೂಢ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 05. ಬೆಂಗಳೂರು ಮೂಲದ ಯುವಕನ ಮೃತದೇಹವು ತೊಕ್ಕೊಟ್ಟು ಸಮೀಪದ ಬಾವಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಮೃತ ಯುವಕನನ್ನು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್ ಎ.ಎಸ್ (36) ಎಂದು ಗುರಿತಿಸಲಾಗಿದೆ. ನ. 30ರಂದು ಬೆಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಬಂದಿದ್ದ ಮಹಂತೇಶ್ ರಾ.ಹೆ.66 ರಲ್ಲಿರುವ ಕಾಪಿಕಾಡಿನ ನಿರ್ವಿಕಲ್ಪ ಲಾಡ್ಜ್ ನಲ್ಲಿ ತಂಗಿದ್ದರು. ಡಿ. 01 ರಂದು ಸಂಜೆ ಲಾಡ್ಜ್ ರೂಮಿನ ಅವಧಿ ಮುಗಿದ ಹಿನ್ನೆಲೆ ರೂಮ್ ಬಾಯ್ ಬಂದು ತಪಾಸಣೆ ನಡೆಸಿದಾಗ ಮಹಾಂತೇಶ್ ಇರಲಿಲ್ಲ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಭಾನುವಾರದಂದು ಮಧ್ಯಾಹ್ನ ವೇಳೆಗೆ ಅಂಬಿಕಾ ರೋಡ್ ಹೆದ್ದಾರಿ ಅಂಚಿನಲ್ಲಿರುವ ಅಬ್ದುಲ್ ಸಮದ್ ಎಂಬವರ ಮನೆಯ ಹಿಂದಿನ ಬಾವಿಯಲ್ಲಿ ಮಹಂತೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮದ್ ಮನೆ ಕೆಲಸದಾಕೆ ಸುಗಂಧಿ ಎಂಬವರು ಬಾವಿಯೊಳಗೆ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ನೋಡಿದಾಗ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಅಗ್ನಿಶಾಮಕ ದಳ ಸಿಬಂದಿ ಆಗಮಸಿ ಮೃತದೇಹ ಮೇಲಕ್ಕೆತ್ತಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

Scroll to Top