ಕಡಬ: ಪಾಲೋಳಿ ತಾತ್ಕಾಲಿಕ ಸೇತುವೆ ಸಮಸ್ಯೆಗೆ ಕೊನೆಗೂ ಮುಕ್ತಿ ➤ ಎ.25 ರಂದು 19.58 ಕೋಟಿ ಅನುದಾನದಲ್ಲಿ ನೂತನ ಸೇತುವೆಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಎ.21. ಕಡಬ – ಎಡಮಂಗಲ ಸಂಪರ್ಕ ರಸ್ತೆಯ ಪಾಲೋಳಿ ಎಂಬಲ್ಲಿ ಕುಮಾರಧಾರಾ ನದಿಗೆ ಊರವರೇ ಸೇರಿ ನಿರ್ಮಿಸುತ್ತಿದ್ದ ತಾತ್ಕಾಲಿಕ ಸೇತುವೆಗೆ ಕೊನೆಗೂ ಮುಕ್ತಿ ದೊರೆಯಲಿದೆ‌.

ರಾಜ್ಯ ಬಂದರು ಮತ್ತು ಮೀನುಗಾರಿಕಾ ಸಚಿವರೂ, ಸುಳ್ಯ ಶಾಸಕರಾದ ಎಸ್.ಅಂಗಾರರ ಶಿಫಾರಸ್ಸಿನಡಿ ನಬಾರ್ಡ್ – RIDF ಯೋಜನೆಯಡಿ 19 ಕೋಟಿ 58 ಲಕ್ಷ ಮಂಜೂರಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಎಪ್ರಿಲ್ 25ರಂದು ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ತಿಳಿಸಿದ್ದಾರೆ. ಶುಕ್ರವಾರದಂದು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ಬೆಳಿಗ್ಗೆ 9.45ಕ್ಕೆ ಭೂಮಿಪೂಜೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಎಸ್.ಅಂಗಾರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಡಬ, ಪಿಜಕ್ಕಳ, ಎಡಮಂಗಲ, ದೋಳ್ಪಾಡಿ ಭಾಗದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸತೀಶ್ ನಾಯಕ್, ಮಂಡಲ ಸಮಿತಿ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್ ಎ.ಪಿ., ಬಿಜೆಪಿ ಹಿರಿಯ ಮುಖಂಡ ಸುಂದರ ಗೌಡ ಮಂಡೆಕರ, ಶಕ್ತಿ ಕೇಂದ್ರದ ಕಾರ್ಯದರ್ಶಿ ಕೇಶವ ಬೇರಿಕೆ ಉಪಸ್ಥಿತರಿದ್ದರು.

Also Read  ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ

 

 

error: Content is protected !!
Scroll to Top