(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಡಿ.09: ಶಬ್ದದ ವೇಗಕ್ಕಿಂತ ಅತೀ ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ವಿಶ್ವದ ಮೊದಲ ಪೈಲಟ್ ಎಂಬ ಕೀರ್ತಿಗೆ ಭಾಜನರಾಗಿದ್ದ ಜನರಲ್ ಚುಕ್ ಯೀಗರ್(97) ಸೋಮವಾರ ಕೊನೆಯುಸೆರೆಳೆದಿದ್ದಾರೆ.
ಅಮೆರಿಕ ವಾಯುಪಡೆಯಲ್ಲಿ ಪೈಲಟ್ ಆಗಿದ್ದ ವೇಳೆ ತಮ್ಮ 24ನೇ ವಯಸ್ಸಿನಲ್ಲಿ 1947ರ ಅಕ್ಟೋಬರ್‌ನಲ್ಲಿ ಕ್ಯಾಲಿಫೋರ್ನಿಯಾದ ವಾಯುನೆಲೆಯಲ್ಲಿ 43 ಸಾವಿರ ಎತ್ತರದಲ್ಲಿ ಬೆಲ್ ಎಕ್ಸ್-1 ವಿಮಾನದಲ್ಲಿ ಪ್ರತೀ ಗಂಟೆಗೆ 700 ಮೈಲುಗಳಷ್ಟುವೇಗವಾಗಿ ಹಾರಾಟ ನಡೆಸಿದ್ದರು. ಹೀಗಾಗಿ ಈ ವಿಮಾನಕ್ಕೆ ಅವರ ಮೊದಲ ಪತ್ನಿ ಗ್ಲಾಮರಸ್ ಗ್ಲೆನ್ನಿಸ್ ಎಂದು ಹೆಸರಿಸಲಾಯಿತು. 1923ರಲ್ಲಿ ಪಶ್ಚಿಮ ವರ್ಜೀನಿಯಾದಲ್ಲಿ ಜನಿಸಿದ್ದ ಚಕ್ ಯೇಗರ್ 1941ರಲ್ಲಿ ಅಂದರೆ ತಮ್ಮ 18ನೇ ವಯಸ್ಸಿಗೆ ಅಮೆರಿಕ ಸೇನೆ ಸೇರಿದ್ದರು. ಆಗಿನ್ನೂ ಹಿಟ್ಲರ್ ಆರ್ಭಟಿಸುತ್ತಿದ್ದ ಸಮಯ. 2ನೇ ಮಹಾಯುದ್ಧ ಗೆಲ್ಲಲು ಇಡೀ ಜಗತ್ತು ಬಡಿದಾಡುತ್ತಿತ್ತು. ಮಿತ್ರ ಪಡೆ ಹಾಗೂ ಶತ್ರು ಪಡೆ ಕಾಳಗದಲ್ಲಿ ಕೋಟ್ಯಂತ ಜನ ಮೃತಪಟ್ಟಿದ್ದರು. ಅದರಲ್ಲೂ ಸೇನೆ ಸೇರಿಕೊಂಡವ ವಾಪಸ್ ಬರುವುದೇ ಇಲ್ಲವೇನೋ ಎಂಬಂತಹ ಭಯ ಆವರಿಸಿತ್ತು. ಅಂತಹ ಸಂದರ್ಭದಲ್ಲೂ ಚಕ್ ಯೇಗರ್ ದೇಶ ಸೇವೆಗೆ ಮುನ್ನುಗ್ಗಿದ್ದರು.