(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.12: ಬೆಂಗಳೂರಿನಲ್ಲಿ ಮುಂದಿನವರ್ಷ ಫೆಬ್ರವರಿ 3ರಿಂದ 7ರ ತನಕ ನಡೆಯಲಿರುವ ಏರೋ ಇಂಡಿಯಾ 2021ರ ವೆಬ್ಸೈಟ್ ( https://aeroindia.gov.in )ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಚಾಲನೆ ನೀಡಿದರು.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದು 13ನೇ ಆವೃತ್ತಿಯ ಪ್ರದರ್ಶನವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಆನ್ಲೈನ್ ಸೇವೆಗಳನ್ನೂ ಈ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ. ಪ್ರದರ್ಶಕರು ಈ ಸೈಟ್ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಪ್ರದರ್ಶನ ಸ್ಥಳ ಮುಂಗಡ ಕಾಯ್ದಿರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯ ಅನುಸಾರ ಪ್ರದರ್ಶನ ಸ್ಥಳ ವಿತರಣೆಯಾಗಲಿದೆ. ಅಕ್ಟೋಬರ್ 31ರೊಳಗೆ ಮುಂಗಡ ಕಾಯ್ದಿರಿಸುವವರಿಗೆ ವಿನಾಯಿತಿ ಸಿಗಲಿದೆ. ವೆಬ್ಸೈಟ್ನಲ್ಲಿ ರಕ್ಷಣಾ ಸಚಿವಾಲಯದ ಇತ್ತೀಚಿನ ನೀತಿ, ನಿಯಮಗಳು, ಹೊಸ ಯೋಜನೆಗಳ ವಿವರಗಳು ಲಭ್ಯ ಇವೆ. ವಾಣಿಜ್ಯ ಮತ್ತು ಇತರೆ ಉದ್ದೇಶದ ವಿಸಿಟರ್ಸ್ ಪ್ರದರ್ಶನ ಟಿಕೆಟ್ಗಳನ್ನು ಆನ್ಲೈನ್ ಮೂಲಕವೇ ಖರೀದಿಸಬಹುದಾಗಿದೆ. ಪ್ರದರ್ಶನ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿರುವ ಕೋವಿಡ್ ನಿಯಮಗಳು ಚಾಲ್ತಿಯಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ.