(ನ್ಯೂಸ್ ಕಡಬ) newskadaba.com ಬೆಂಗಳೂರು. ಸೆ.02: ಇಂದು ವಿಶ್ವ ತೆಂಗಿನಕಾಯಿ ದಿನ. ದೇಶದಲ್ಲಿ ಕೇರಳ ಮತ್ತು ತಮಿಳುನಾಡು ನಂತರ ಅತಿ ಹೆಚ್ಚು ತೆಂಗಿನ ಕಾಯಿ ಬೆಳೆಯುವ ರಾಜ್ಯ ಕರ್ನಾಟಕವಾಗಿದ್ದು, ರೈತರ ಅದಾಯ ಮೂಲವಾಗಿದೆ. ಹೈನುಗಾರಿಕೆ ನಂತರ ಅತಿ ಹೆಚ್ಚು ಆದಾಯ ನೀಡುವ ಜತೆಗೆ, ಕೃಷಿ ಕ್ಷೇತ್ರಕ್ಕೆ ಪೂರಕವಾಗಿರುವ ತೆಂಗು ಬೆಳೆ ಇದೀಗ ಹಲವು ಆಯಾಮಗಳನ್ನು ಒಳಗೊಂಡಿದೆ.
ರಾಜ್ಯದ ತುಮಕೂರು ಜಿಲ್ಲೆಯನ್ನು ಕಲ್ಪತರು ನಾಡು ಎಂದು ಕರೆಯುತ್ತಿದ್ದು, ಇಲ್ಲಿ ಅತಿ ಹೆಚ್ಚು ತೆಂಗಿನ ಮರಗಳಿವೆ. ಜತೆಗೆ ತಿಪಟೂರಿನ ತೆಂಗಿನಕಾಯಿಗೆ ವಿಶೇಷ ಮನ್ನಣೆ ಇದ್ದು,ಅತಿ ಹೆಚ್ಚು ತೆಂಗಿನಕಾಯಿ ವಹಿವಾಟು ನಡೆಯುವ ಪ್ರದೇಶ ವೆಂಬಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಶ್ರೀಲಂಕಾ ಸೇರಿ ಹೊರ ರಾಷ್ಟ್ರಗಳಿಂದ ತೆಂಗು ಆಮದಾಗಿತ್ತಿದ್ದ ಕಾರಣ ತೆಂಗಿನ ಬೆಲೆ ಗಣನೀಯ ಕುಸಿತವಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆ. ಕೃಷಿ ಚಟುವಟಿಕೆ ಜತೆಗೆ ರೈತರಿಗೆ ಆದಾಯ ಮೂಲವಾಗಿರುವ ತೆಂಗಿನ ಕಾಯಿ ಮಹತ್ವವನ್ನು ಸಾರುವ ಉದ್ದೇಶದಿಂದ 2009 ರಿಂದ ಈ ದಿನವನ್ನು “ವಿಶ್ವ ತೆಂಗು ದಿನ” ಎಂದು ವಿಶ್ವಸಂಸ್ಥೆ ಆಚರಿಸುತ್ತಾ ಬಂದಿದೆ.