(ನ್ಯೂಸ್ ಕಡಬ) newskadaba.com ಕಾಸರಗೋಡು. ಆ,30: ತುಳು ಭಾಷೆ, ಕಲೆ- ಸಂಸ್ಕೃತಿಗೆ ಚಿನ್ನದ ಚೌಕಟ್ಟು ಒದಗುತ್ತಿದೆ. ತುಳುಭವನ ಶುಭಾರಂಭಕ್ಕೆ ಸಿದ್ಧವಾಗುವ ಮೂಲಕ ಕಾಸರಗೋಡು ಜಿಲ್ಲೆಯ ತುಳು ಪ್ರೇಮಿಗಳ ಕನಸು ನನಸಾಗುತ್ತಿದೆ.
ಮಂಜೇಶ್ವರ ತಾಲೂಕಿನ ಹೊಸಂಗಡಿ ಬಳಿಯ ಕಡಂಬಾರು ಗ್ರಾಮದ ದುರ್ಗಿಪಳ್ಳದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ತುಳುಭವನ ಸಿದ್ಧವಾಗಿದೆ. 2007ರ ಸೆ.3ರಂದು ಅಂದಿನ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಕೇರಳ ತುಳು ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಮಾಜಿ ಶಾಸಕ ಸಿ.ಎಚ್.ಕುಂಞಂಬು ತುಳು ಅಕಾಡೆಮಿ ಸ್ಥಾಪನೆ, ತುಳು ಭವನ ನಿರ್ಮಾಣ ಇತ್ಯಾದಿ ಚಟುವಟಿಕೆಗಳಿಗೆ ಅಹೋರಾತ್ರಿ ಯತ್ನ ನಡೆಸಿ ಯಶಸ್ವಿಯಾಗಿದ್ದರು. ಕೇರಳ ತುಳುಭವನ ಅಕಾಡೆಮಿ ಸೆ.3ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಗ್ಗೆ 11.30ಕ್ಕೆ ಸಂಸ್ಕೃತಿ ಸಚಿವ ಎ.ಕೆ.ಬಾಲನ್ ಆನ್‌ಲೈನ್ ಮೂಲಕ ಉದ್ಘಾಟನೆ ನಡೆಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು.ಕೇರಳ ತುಳುಭವನದ ನೇತೃತ್ವದಲ್ಲಿ ಸಾರ್ವಜನಿಕರಿಗೆ ತುಳು ಲಿಪಿ ಕಲಿಕೆಗೆ ಆನ್‌ಲೈನ್ ಸೌಲಭ್ಯ ಸಿದ್ಧಗೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಜತೆಯಲ್ಲಿ ತುಳು ಪ್ರೇಮಿ ಸಾರ್ವಜನಿಕರಿಗೆ ಇದು ಪ್ರಯೋಜನಕಾರಿಯಾಗಲಿದೆ.