(ನ್ಯೂಸ್ ಕಡಬ) newskadaba.com ಕೇರಳ: ಆ.07,. ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಸ ಪ್ರಿಯರ ನೆಚ್ಚಿನ ತಾಣ, ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಕೇರಳದ ಮುನ್ನಾರ್ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಘಟನೆಯಲ್ಲಿ 7 ಮಂದಿ ಮೃತ ಪಟ್ಟಿದ್ದು, ಸುಮಾರು 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.
ಕೇರಳ ರಾಜ್ಯದ ಮುನ್ನಾರ್ ನ ರಾಜನಲಾ ಪ್ರದೇಶದಲ್ಲಿ ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಕಟ್ಟಡ ಧರೆಗುರುಳಿಲಿದ್ದು ಸುಮಾರು ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಇದುವರೆಗೆ 5 ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರನ್ನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ಭೂಕುಸಿತ ಉಂಟಾದ ಪ್ರದೇಶ ಸಂಪೂರ್ಣ ಸಂಪರ್ಕವನ್ನು ಕಳೆದುಕೊಂಡಿದ್ದು, ಕೆಲವು ರಸ್ತೆ ಕೊಚ್ಚಿ ಹೋಗಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಕಂದಾಯ ಸಚಿವ ಚಂದ್ರಶೇಖರನ್ ತಿಳಿಸಿದ್ದಾರೆ.
ಮುನ್ನಾರ್ ದಕ್ಷಿಣ ಭಾರತದ ಜನಪ್ರಿಯ ಗಿರಿ ಧಾಮವಾಗಿದ್ದೂ ಇಲ್ಲಿ ಸುತ್ತಲ್ಲೂ ಇರುವ ನಿಸರ್ಗದ ಸೌಂದರ್ಯ ಕಣ್ಣಿಗೆ ಹಬ್ಬವಾಗಿದೆ. ಇಲ್ಲಿನ ಮಂಜು ಮುಸುಕಿದ ವಾತಾವರಣ, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಸದಾ ಹಸಿರಿನಿಂದ ಕಂಗೊಳಿಸುವ ಈ ಪ್ರದೇಶ ಈ ಭಾರಿಯ ಮಳೆಯಿಂದಾಗಿ ರೌದ್ರರೂಪ ತಾಳಿದೆ.