ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ  ಮಹಿಳಾ ಆರೋಪಿ ಆತ್ಮಹತ್ಯೆಗೆ ಯತ್ನ.. !!!

(ನ್ಯೂಸ್ ಕಡಬ) newskadaba.com ಚೆನ್ನೈ: ಜು.21., ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಳಿನಿ ಶ್ರೀಹರನ್ ಅವರು ಸೋಮವಾರ ರಾತ್ರಿ ವೆಲ್ಲೂರು ಮಹಿಳಾ ಜೈಲಿನೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆಕೆಯ ವಕೀಲರು ಮಂಗಳವಾರ ತಿಳಿಸಿದ್ದಾರೆ.


ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಶಿಕ್ಷೆ ಪಡೆದಿದ್ದ ನಳಿನಿ ಶ್ರೀಹರನ್ ಕಳೆದ 29 ವರ್ಷಗಳಿಂದ ಇದೇ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ನಳಿನಿ ಪರ ವಕೀಲೆ ಪಿ ಪುಗಲೆಂತಿ ಅವರ ಪ್ರಕಾರ ” ನಳಿನಿ ಮತ್ತು ಕಾರಾಗೃಹದಲ್ಲಿದ್ದ ಇನ್ನೊಬ್ಬ ಅಪರಾಧಿಯ ನಡುವೆ ಜಗಳವಾಗಿದೆ. ಈ ವಿಷಯವನ್ನು ಇತರ ಕೈದಿಗಳು ಜೈಲರ್ ಗೆ ತಿಳಿಸಿದಾಗ ನಳಿನಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ” ಎಂದು ಹೇಳಿದ್ದಾರೆ.
ಮಾತ್ರವಲ್ಲದೆ , ಕಳೆದ 29 ವರ್ಷಗಳಲ್ಲಿ ನಳಿನಿ ಆತ್ಮಹತ್ಯೆಗೆ ಯತ್ನಿಸಿರುವುದು ಇದೇ ಮೊದಲ ಬಾರಿ. ಹೀಗಾಗಿ, ಈ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣವೇನು ಎಂದು ತಿಳಿಯಬೇಕಿದೆ ಎಂದು ಪಿ ಪುಗಲೆಂತಿ ಹೇಳಿದ್ದಾರೆ.

Also Read  ದುಬೈನಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಸಹಿತ ಚಿನ್ನ ವಶಕ್ಕೆ


ಇದಲ್ಲದೆ, ನಳಿನಿಯ ಪತಿ ಮುರುಗನ್ ಸಹ ಇದೇ ಕಾರಾಗೃಹದಲ್ಲಿದ್ದು, ಜೈಲಿನಿಂದ ವಕೀಲರಿಗೆ ಕರೆ ಮಾಡಿ ನಳಿನಿಯನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಆದಷ್ಟು ಬೇಗ ಕಾನೂನಿನ ಮೊರೆ ಹೋಗುವುದಾಗಿ ವಕೀಲರು ತಿಳಿಸಿದ್ದಾರೆ.


ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇ 1991 ರಲ್ಲಿ, ರಾಜೀವ್ ಗಾಂಧಿಯನ್ನು ತಮಿಳುನಾಡಿನ ಶ್ರೀಪೆರುಂಬುದೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಲಂ (ಎಲ್‌ಟಿಟಿಇ) ಆತ್ಮಾಹುತಿ ಬಾಂಬರ್ ಹತ್ಯೆಗೈದರು. ಈ ದಾಳಿಯಲ್ಲಿ ಇತರ 14 ಜನರು ಸಾವನ್ನಪ್ಪಿದ್ದರು.

error: Content is protected !!
Scroll to Top