(ನ್ಯೂಸ್ ಕಡಬ) newskadaba.com ಸೂರತ್. ಜು.11. ಕೊರೊನಾ ನಂತರ ದೇಶಾದ್ಯಂತ ಫೇಸ್ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಅನೇಕರು ವಿವಿಧ ರೀತಿಯ ಮಾಸ್ಕ್ ತಯಾರಿಸಿಕೊಂಡು ಧರಿಸುತ್ತಿದ್ದಾರೆ. ಇದೀಗ ಗುಜರಾತ್‍ನ ಸೂರತ್‍ನಲ್ಲಿ ಆಭರಣ ಅಂಗಡಿಯೊಂದು 1.5 ಲಕ್ಷದಿಂದ 4 ಲಕ್ಷದವರೆಗಿನ ವಜ್ರದ ಮಾಸ್ಕ್ ತಯಾರಿಸಿ ಮಾರಾಟ ಮಾಡಲಾಗುತ್ತಿದೆ.
ಈ ಬಗ್ಗೆ ಮಾತನಾಡಿದ ಆಭರಣ ಅಂಗಡಿಯ ಮಾಲೀಕ ದೀಪಕ್ ಚೋಕ್ಸಿ, “ಲಾಕ್‍ಡೌನ್ ಸಡಿಲಗೊಳಿಸಿದ ನಂತರ ಗ್ರಾಹಕರೊಬ್ಬರು ನಮ್ಮ ಅಂಗಡಿಗೆ ಬಂದು, ನಮ್ಮ ಮನೆಯಲ್ಲಿ ವಿವಾಹ ನಡೆಯುತ್ತಿದೆ. ವಧು-ವರರಿಗೆ ವಿಶಿಷ್ಟವಾದ ಮಾಸ್ಕ್‌ಗಳನ್ನು ಮಾಡಿಕೊಂಡಿ ಎಂದು ಕೇಳಿಕೊಂಡರು. ಆಗ ವಜ್ರದಿಂದ ಮಾಸ್ಕ್ ತಯಾರಿಸುವ ಯೋಚನೆ ಬಂತು. ಈ ವೇಳೆ ನಮ್ಮ ವಿನ್ಯಾಸಕರಿಗೆ ಹೇಳಿ ವಜ್ರದ ಮಾಸ್ಕ್ ರೆಡಿ ಮಾಡಿಸಿದ್ದೇವೆ. ಅದನ್ನು ಅವರು ಖರೀದಿಸಿದ್ದಾರೆ” ಎಂದು ಹೇಳಿದರು.
ಅಲ್ಲದೇ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ವಜ್ರದ ಮಾಸ್ಕ್ ಬೇಕಾಗಬಹುದು ಎಂದು ಅಂತಹ ಅನೇಕ ಮಾಸ್ಕ್‌ಗಳನ್ನು ತಯಾರಿಸಲಾಗಿದೆ. ಇದರಲ್ಲಿ ವಜ್ರ ಮತ್ತು ಅಮೇರಿಕನ್ ವಜ್ರವನ್ನು ಚಿನ್ನದೊಂದಿಗೆ ಬಳಸಲಾಗಿದೆ. ಅಮೆರಿಕನ್ ವಜ್ರದ ಜೊತೆಗೆ ಮಾಸ್ಕ್‌ನಲ್ಲಿ ಹಳದಿ ಚಿನ್ನವನ್ನು ಬಳಸಲಾಗಿದೆ. ಇದರ ಬೆಲೆ 1.5 ಲಕ್ಷ ರೂಪಾಯಿ ಆಗಿದೆ. ಬಿಳಿ ಚಿನ್ನ ಮತ್ತು ರಿಯಲ್ ವಜ್ರದಿಂದ ಮತ್ತೊಂದು ಮಾಸ್ಕ್ ತಯಾರಿಸಿದ್ದೇವೆ. ಇದರ ಬೆಲೆ 4 ಲಕ್ಷ ರೂಪಾಯಿಗಳು ಎಂದು ಚೋಕ್ಸಿ ತಿಳಿಸಿದರು.
ನಮ್ಮ ಕುಟುಂಬದಲ್ಲಿ ಮದುವೆ ಇರುವುದರಿಂದ ನಾನು ಆಭರಣ ಖರೀದಿಸಲು ಅಂಗಡಿಗೆ ಬಂದೆ. ಇಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುವ ವಜ್ರದ ಮಾಸ್ಕ್‌ಗಳನ್ನು ನೋಡಿದೆ. ಆದ್ದರಿಂದ ನಾನು ವಜ್ರದ ಮಾಸ್ಕ್ ಖರೀದಿಸಲು ನಿರ್ಧರಿಸಿದೆ. ಅಲ್ಲದೇ ನನ್ನ ಉಡುಪಿಗೆ ಹೊಂದಾಣಿಕೆಯಾಗುವ ಮಾಸ್ಕ್ ಖರೀಸಿದೆ ಎಂದು ಗ್ರಾಹಕರೊಬ್ಬರು ಹೇಳಿದರು.