(ನ್ಯೂಸ್ ಕಡಬ) newskadaba.com ಜೂ.16: ಭಾರತ – ಚೀನಾ ಗಡಿ ಸಂಘರ್ಷದಲ್ಲಿ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಸೇನೆಗೆ ಹಾನಿ ಉಂಟಾಗಿದ್ದು ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಮಂಗಳವಾರ ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿದೆ. ಜತೆಗೆ , ಭಾರತೀಯ ಸೈನಿಕರು ಚೀನಾದ ಸೈನಿಕರಿಗೆ ಪ್ರತ್ಯುತ್ತರ ನೀಡಿದ್ದು, ಚೀನಾದ 43 ಸೈನಿಕರು ಹತರಾಗಿದ್ದಾರೆ.
ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸೋಮವಾರ ರಾತ್ರಿ ಸಂಘರ್ಷ ಉಂಟಾಗಿದ್ದು ಮೂವರು ಯೋಧರು ಹುತಾತ್ಮರಾಗಿ, 17 ಸೈನಿಕರು ಗಂಭೀರ ಗಾಯಗೊಂಡಿದ್ದರು. ಆದರೆ ಗಾಯಗೊಂಡ ಸೈನಿಕರು ಕೂಡಾ ಸಾವನ್ನಪ್ಪಿದ್ದು ಒಟ್ಟು 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಮೊದಲು ಉಭಯ ರಾಷ್ಟ್ರಗಳ ಘರ್ಷನೆಯಿಂದ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿತ್ತು. ಈ ಸಂದರ್ಭದಲ್ಲಿ ಚೀನಾದ 100ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಸೇನೆಯ ಕರ್ನಲ್ ಸಂತೋಷ್ ಬಾಬು, ಹವಾಲ್ದಾರ್ ಪಳನಿ ಮತ್ತು ಸಿಪಾಯಿ ಓಝಾ ಹುತಾತ್ಮರಾಗಿದ್ದರೆ ಇನ್ನು ಭಾರತ –ಚೀನಾ ಸಂಘರ್ಷದಲ್ಲಿ, ಹುತಾತ್ಮರಾದ ಯೋಧರ ಪೈಕಿ, ತಮಿಳುನಾಡಿನ ಹವಾಲ್ದಾರ್ ಪಳನಿ ಕೂಡ ಒಬ್ಬರಾಗಿದ್ದಾರೆ. ಹುತಾತ್ಮ ಯೋಧ ಪಳನಿಯವರ ಕುಟುಂಬಕ್ಕೆ ತಮಿಳುನಾಡು ಸಿ.ಎಂ ಕೆ. ಪಳನಿಸ್ವಾಮಿಯವರು 20 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ.
ಹುತಾತ್ಮರಾದ ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರು, ಸೇನೆಗೆ ಸೇರಿ ದೇಶ ಸೇವೆ ಮಾಡುವ ಮೂಲಕ ತಮ್ಮ ತಂದೆಯ ಕನಸನ್ನು ಈಡೇರಿಸಿದ್ದರು. ‘’ ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ತಮಗೆ ಸಾಧ್ಯವಾಗಿರಲಿಲ್ಲ ಆದರೆ, ಆ ಕನಸನ್ನು ನನ್ನ ಮಗ ಈಡೇರಿಸಿದ್ದಾನೆ’ ‘ಸೈನ್ಯಕ್ಕೆ ಸೇರಲು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ನಾನು ನನ್ನ ಮಗ ಸೇನೆಗೆ ಸೇರಲಿ ಎಂದು ಬಯಸಿದ್ದೆ. ಆದರೆ, ಆದನ್ನು ನನ್ನ ಸಂಬಂಧಿಕರು ವಿರೋಧಿಸಿದ್ದರು’ ‘ನನ್ನ ಮಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ಬಗ್ಗೆ ಹೆಮ್ಮೆ ಇದೆ’ ಎಂದು ಸೇನೆಯ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರ ತಂದೆ ಬಿ.ಉಪೇಂದರ್ ಅವರು ಹೇಳಿಕೊಂಡಿದ್ದಾರೆ. ಇನ್ನು ದಾಳಿ ವೇಳೆ ಸಾಕಷ್ಟು ಸೈನಿಕರು ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ಅನೇಕರು ತೀವ್ರವಾಗಿಗಾಯಗೊಂಡಿದ್ದರು. ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.