(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್ 11: ಕೊರೊನಾವೈರಸ್ ಲಾಕ್ಡೌನ್ ಸಲುವಾಗಿ ಕಳೆದ ಮೂರು ತಿಂಗಳು ಆದಾಯವಿಲ್ಲದೇ ತೀವ್ರ ತೊಂದರೆ ಅನುಭವಿಸಿದ್ದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ ತಲಾ 5 ಸಾವಿರ ರುಪಾಯಿಯ ಭರವಸೆ ನೀಡಿತ್ತು.
ಇದರ ಅಂಗವಾಗಿ ಕರ್ನಾಟಕ ಸರ್ಕಾರ ಬುಧವಾರ 40 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಒಂದು ಬಾರಿ ಪರಿಹಾರವಾಗಿ ತಲಾ 5 ಸಾವಿರ ರುಪಾಯಿ ಘೋಷಣೆ ಮಾಡಿದ್ದರು. ಸದ್ಯ ಹಣ ಪಡೆಯಲು 1 ಲಕ್ಷ ಟ್ಯಾಕ್ಸಿ ಮತ್ತು ಆಟೋ ಚಾಲಕರು ಹೆಸರು ನೋಂದಾಯಿಸಿಕೊಂಡಿದ್ದು, ಇನ್ನೂ 6 ಲಕ್ಷ ಜನ ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಕಾರ್ಮಿಕ ಇಲಾಖೆಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ಹಂತ ಹಂತವಾಗಿ ಟ್ಯಾಕ್ಸಿ ಮತ್ತು ಆಟೋ ಚಾಲಕಕರಿಗೆ ಪರಿಹಾರದ ಹಣ ಜಮಾವಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ.