(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಮೇ.29. ಆಗ ತಾನೆ ಹುಟ್ಟಿದ ಗಂಡು ಮಗುವನ್ನು ಕೃಷಿ ಭೂಮಿಯಲ್ಲಿ ಹೂತಿಟ್ಟ ಹೃದಯವಿದ್ರಾಕ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ.
ಭೂಮಿಯೊಳಗಿನಿಂದ ಮಗುವೊಂದು ಅಳುತ್ತಿರುವ ಶಬ್ದ ಕೇಳಿ ಮಣ್ಣು ಅಗೆದು ನೋಡಿದಾಗ ಗಂಡು ಮಗುವೊಂದು ಇರುವುದು ಬೆಳಕಿಗೆ ಬಂದಿದೆ. ಮಗುವಿನ ಕಣ್ಣು, ಮೂಗು, ಬಾಯಲ್ಲಿ ಮಣ್ಣು ತುಂಬಿದ್ದು ಉಸಿರಾಡಲು ಸಮಸ್ಯೆಯಾಗಿತ್ತು. ಸ್ಥಳೀಯರ ಸಹಾಯದಿಂದ ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಿ ಮುಖದಲ್ಲಿದ್ದ ಮಣ್ಣನ್ನು ಶುಚಿಗೊಳಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.
ಜೀವಂತವಾಗಿ ಸಮಾಧಿ ಮಾಡಲು ಹೊರಟ ಮಗುವಿನ ಪೋಷಕರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಮಗು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.