(ನ್ಯೂಸ್ ಕಡಬ) newskadaba.com ನವದೆಹಲಿ, ಆ.28, ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿಭಾಗದಲ್ಲಿರುವ ವಿವಾದಿತ ಡೋಕ್ಲಾಮ್ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಚೀನಾ ಸರಕಾರ ನಿರ್ಧರಿಸಿದೆ. ಹೀಗಾಗಿ ಈ ವಿವಾದ ಬಗೆಹರಿಯುವ ಸಾಧ್ಯತೆ ಗೋಚರಿಸಿದೆ.
ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಡೋಕ್ಲಾಂ ಗಡಿಯಲ್ಲಿ ಉಭಯ ರಾಷ್ಟ್ರಗಳ ಸೇನೆಗಳು ಕಾದಾಟ ನಡೆಸುತಿತ್ತು. ಆಗಸ್ಟ್ 15 ರಂದೇ ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಈ ನಡುವೆ ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಭಾರತೀಯ ಸೇನೆ ಮತ್ತು ಸರ್ಕಾರದ ವಿರುದ್ಧ ಸುದ್ದಿಗಳನ್ನು ಪ್ರಕಟಿಸಿ ಕೆಣಕುತಿತ್ತು.
ಈ ಎಲ್ಲಾ ಬೆಳವಣಿಗೆ ಬಳಿಕ ಉಭಯ ರಾಷ್ಟ್ರಗಳ ಸೇನೆಗಳು ಒಮ್ಮತ ನಿರ್ಧಾರಕ್ಕೆ ಬಂದಿದ್ದು ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಸೆಪ್ಟೆಂಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶದದಲ್ಲಿ ಪಾಲ್ಗೊಳ್ಳಲು ಚೀನಾ ಪ್ರವಾಸ ಹಮ್ಮಿಕೊಂಡಿದ್ದು, ಇದರ ಬೆನ್ನಲ್ಲೇ ಚೀನಾ ಸೇನೆಯನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿದ್ದು, ಭಾರತದ ರಾಜತಾಂತ್ರಿಕ ನೀತಿಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಚೀನಾ ಸೇನೆಯ ಮಾಧ್ಯಮ ವಕ್ತಾರರು ಈ ಹಿಂದೆ ಪ್ರತಿಕ್ರಿಯಿಸಿ, ಯುದ್ಧ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 1962ರ ಯುದ್ಧದಿಂದ ಭಾರತ ಪಾಠ ಕಲಿಯಲಿ. ಭಾರತ ನಿಯೋಜಿಸಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಹೇಳಿಕೆ ನೀಡುವ ಮೂಲಕ ಕೆಣಕ್ಕಿದ್ದರು.
ಹಣಕಾಸು ಸಚಿವ ಅರುಣ್ ಜೇಟ್ಲಿ ಚೀನಾ ನಡೆಯ ಬಗ್ಗೆ ಜೂನ್ 30ರಂದು ಪ್ರತಿಕ್ರಿಯಿಸಿ, ಚೀನಾ ನಮಗೆ ಇತಿಹಾಸವನ್ನು ನೆನಪಿಸಲು ಪ್ರಯತ್ನಿಸುತ್ತಿದೆ. 1962ರ ಭಾರತವೇ ಬೇರೆ, 2017ರ ಭಾರತವೇ ಬೇರೆ. ದೇಶದ ಭದ್ರತೆಗೆ ಸಂಬಂಧಿಸಿದಂತೆ ಭಾರತ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳುವ ಮೂಲಕ ಖಡಕ್ ತಿರುಗೇಟು ನೀಡಿದ್ದರು.
ಜೂನ್ 16ರಂದು ಭೂತಾನ್ ಗೆ ಸೇರಿದ್ದ ಡೋಕ್ಲಾಂ ನಲ್ಲಿ ಚೀನಾ ಅತಿಕ್ರಮಣವಾಗಿ ಪ್ರವೇಶಿಸಿತ್ತು. ಈ ಪ್ರವೇಶವನ್ನು ವಿರೋಧಿಸಿ ಭಾರತೀಯ ಸೇನೆ ಅಡ್ಡವಾಗಿ ನಿಂತಿತ್ತು. ಇದರಿಂದಾಗಿ ಭಾರತ ಮತ್ತು ಚೀನಾದ ನಡುವೆ ರಾಜತಾಂತ್ರಿಕ ಸಂಬಂಧ ಸ್ವಲ್ಪ ಹಳಸಿತ್ತು.