ಮೂರೇ ದಿನಗಳಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಿದ ರಿಲಯನ್ಸ್ ಜಿಯೋ…..!!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ.28. ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನು ಉಂಟುಮಾಡಿದ್ದ ಬಹುನಿರೀಕ್ಷಿತ 4 ಜಿ ಸೌಲಭ್ಯದ ಉಚಿತ ಜಿಯೋಫೋನ್ ಬುಕ್ಕಿಂಗ್ ನ್ನು ಕೇವಲ ಮೂರೇ ದಿನಗಳಲ್ಲಿ ಕಂಪೆನಿಯು ದಿಢೀರ್ ಸ್ಥಗಿತಗೊಳಿಸಿದೆ.
ನಿರೀಕ್ಷೆಗಿಂತ ಅಧಿಕ ಬುಕ್ಕಿಂಗ್ ಆಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಬುಕ್ಕಿಂಗ್ ಆದ ಫೋನ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ವಿತರಿಸಲಿದೆ. ಈಗಾಗಲೇ ಲಕ್ಷಾಂತರ ಮಂದಿ ಜಿಯೋಫೋನ್ ಬುಕ್ಕಿಂಗ್ ಮಾಡಿದ್ದು, ಮುಂದಿನ ಬುಕ್ಕಿಂಗ್ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ರಿಲಯನ್ಸ್ ಜಿಯೊ ವೆಬ್‌ಸೈಟ್ ಹೇಳಿದೆ. ಕಂಪೆನಿಯು ಪ್ರತೀ ವಾರ 50 ಲಕ್ಷ ಜಿಯೊಫೋನ್ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕಂಪೆನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ್ದರು. ಆಗಸ್ಟ್ 24ರಂದು ಜಿಯೋಫೋನ್ ಬುಕ್ಕಿಂಗ್ ಆರಂಭವಾಗಿದ್ದು, 500 ರೂ. ಮುಂಗಡ ನೀಡಿ ಬುಕ್ ಮಾಡಬಹುದಿತ್ತು. ಉಳಿದ 1000 ರೂಪಾಯಿಯನ್ನು ಗ್ರಾಹಕರಿಗೆ ಸೆಟ್ ವಿತರಿಸುವ ವೇಳೆ ಪಾವತಿ ಮಾಡಬೇಕಾಗುತ್ತದೆ. ಎಲ್ಲ 1500 ರೂಪಾಯಿ ಕೂಡಾ 36 ತಿಂಗಳು ಬಳಕೆ ಮಾಡಿ ಫೋನ್ ಹಿಂದಿರುಗಿಸಿದರೆ ಮರುಪಾವತಿ ಮಾಡುವ ಮೊತ್ತವಾಗಿರುವುದರಿಂದ ಫೋನ್ ಸಂಪೂರ್ಣ ಉಚಿತ ಎಂದು ಕಂಪೆನಿ ಪ್ರಚಾರ ಮಾಡಿದೆ.
error: Content is protected !!
Scroll to Top