ಕಾಸರಗೋಡು, ಜ 24: ಮಂಜೇಶ್ವರ ಪಾವೂರು ಕೆದಂಬಾಡಿಯ ಇಸ್ಮಾಯಿಲ್ (50) ನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಸ್ಮಾಯಿಲ್ ಪತ್ನಿ ಹಾಗೂ ಈಕೆಯ ನೆರೆಮನೆಯ ಯುವಕನೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಇಸ್ಮಾಯಿಲ್ ನ ಪತ್ನಿ ಆಯಿಷಾ (30) ಮತ್ತು ಮುಹಮ್ಮದ್ ಹನೀಫ್ (35) ಎಂದು ಗುರುತಿಸಲಾಗಿದೆ. ಜನವರಿ 20ರಂದು ಇಸ್ಮಾಯಿಲ್ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹವನ್ನು ಗಮನಿಸಿದ್ದ ಸಂಬಂಧಿಕರು ಇಸ್ಮಾಯಿಲ್ ನ ಕುತ್ತಿಗೆಯಲ್ಲಿ ಹಗ್ಗ ಬಿಗಿದ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಸ್ಥಳಕ್ಕೆ ತಲಪಿದ್ದ ಪೊಲೀಸರು ಪತ್ನಿಯನ್ನು ವಿಚಾರಿಸಿದಾಗ ಇಸ್ಮಾಯಿಲ್ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಬಳಿಕ ಹನೀಫ್ ನ ಸಹಾಯದಿಂದ ಮೃತದೇಹವನ್ನು ಕೆಳಗಿಳಿಸಿದ್ದಾಗಿ ಹೇಳಿಕೆ ನೀಡಿದ್ದಳು. ಅಸಹಜ ಸಾವು ಎಂದು ಪೊಲೀಸರು ಕೇಸು ದಾಖಲಿಸಿದ್ದರು. ಬಳಿಕ ಪೊಲೀಸರು ಮೃತದೇಹವನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ತಿಳಿದುಬಂತು. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಪತಿ ಕೊಲೆ ಮಾಡಲು ಪತ್ನಿ ಆಯಿಷಾಳು ಹನೀಫ್ ನಿಗೆ ಹತ್ತು ಸಾವಿರ ಕೊಟೇಶನ್ ನೀಡಿದ್ದಾಗಿ ತನಿಖೆ ಯಿಂದ ತಿಳಿದುಬಂದಿದೆ. ಆಯಿಷಾ ಮತ್ತು ಹನೀಫ್ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.