(ನ್ಯೂಸ್ ಕಡಬ) newskadaba.com ಮಂಗಳೂರು, ಜ.12. ನಗರದ ಹೊರವಲಯದ ಸುರತ್ಕಲ್ ಸಮೀಪದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯನ್ನು ಅಪಹರಿಸಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜಿಲ್ಲಾ 4ನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪಂಜಿಮೊಗರು ನಿವಾಸಿ ಮುಹಮ್ಮದ್ ತಬ್ಸೀದ್ (24), ಮರಕಡದ ನಿವಾಸಿ ಸೈಯದ್ ಆಫ್ರಿದಿ (24), ಕುಂಜತ್‌ಬೈಲ್‌ನ ಮುಹಮ್ಮದ್ ಮುಕ್ಸಿತ್ (24), ಮೂಡುಬಿದಿರೆಯ ಅಹ್ಮದ್ ಹುಸೈನ್ (24), ಖಾದರ್ ಸಫ್ವಾ (24) ಜೀವಾವಧಿ ಶಿಕ್ಷೆಗೊಳಗಾದವರು. 2015ರಲ್ಲಿ ಸುರತ್ಕಲ್‌ನ ಖಾಸಗಿ ಕಾಲೇಜಿನ ವಿದ್ಯಾರ್ಥಿ, ಕೇರಳ ಮೂಲದ ರಾಝಿಕ್ ಎಂಬಾತ ತನ್ನ ತಂದೆ ನೀಡಿದ ಹೊಸ ದುಬಾರಿ ಬೆಲೆಯ ಮೊಬೈಲನ್ನು ಮಾರಾಟ ಮಾಡಲೆಂದು ‘ಒಎಲ್‌ಎಕ್ಸ್’ನಲ್ಲಿ ಹಾಕಿದ್ದರು. ಈತನನ್ನು ಸಂಪರ್ಕಿಸಿದ್ದ ಆರೋಪಿಗಳು ಮಾತುಕತೆಗೆಂದು ಕರೆದು ಎಟಿಣಂನಲ್ಲಿ ಹಣ ಡ್ರಾ ಮಾಡಿಕೊಂಡು ಕೊಡುವುದಾಗಿ ಹೇಳಿ ಯುವಕನನ್ನು ಅಪಹರಿಸಿದ್ದಲ್ಲದೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಸಿದುಕೊಂಡ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ರಾಮಲಿಂಗೇಗೌಡರು, ವಿದ್ಯಾರ್ಥಿಯ ಅಪಹರಣ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364 (ಎ) (ಅಪಹರಣ), 395 (ದೌರ್ಜನ್ಯ), 506 (ಕೊಲೆ ಬೆದರಿಕೆ)ರ ಪ್ರಕಾರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತಲಾ ಆರು ಸಾವಿರ ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.