ಕೋಲ್ಕತ್ತಾ, ಡಿ.26: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಅವರು ಕೋಲ್ಕತಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನು ಈ ಹಿಂದೆ ಮೃತರಿಗೆ ಪರಿಹಾರ ಘೋಷಿಸಿ ಬಳಿಕ ಸಿಎಂ ಯಡಿಯೂರಪ್ಪ, ಮೃತರು ಗಲಭೆಯಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಒಂದು ರೂಪಾಯಿ ಪರಿಹಾರ ನೀಡುವುದಿಲ್ಲ, ಈ ಹಿಂದೆ ಪರಿಹಾರ ಘೋಷಣೆ ಮಾಡಿದರೂ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು. ಮಂಗಳೂರಿನಲ್ಲಿ ಡಿ.19 ರಂದು ನಡೆದಿದ್ದ ಹಿಂಸಾಚಾರದ ಗಲಭೆಯಲ್ಲಿ ಜಲೀಲ್ ಮತ್ತು ನೌಶಿನ್ ಎಂಬಿಬ್ಬರು ಮೃತಪಟ್ಟಿದ್ದರು.
ಇದಲ್ಲದೇ ದಿಲ್ಲಿಯ ವಕ್ಫ್ ಬೋರ್ಡ್ ಉತ್ತರ ಪ್ರದೇಶ ಹಾಗೂ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಪ್ರತಿಭಟನೆಯ ಸಂದರ್ಭ ಮೃತಪಟ್ಟ ಕುಟುಂಬಗಳಿ ತಲಾ ಐದು ಲಕ್ಷ ಪರಿಹಾರ ಘೋಷಿಸಿದೆ. ದೆಹಲಿ ವಕ್ಫ್ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ಪೊಲೀಸರೊಂದಿಗೆ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಲಾದ ಕುಟುಂಬಗಳಿಗೆ ಮಂಡಳಿಯಿಂದ 5 ಲಕ್ಷ ರೂ. ಸಹಾಯಧನ ನೀಡಲಿದೆ ಎಂದು ಹೇಳಿದ್ದಾರೆ