(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆಗಸ್ಟ್.16.ಮುಂದಿನ ಕೆಲವು ದಿನಗಳಲ್ಲಿ ಕಾಶ್ಮೀರದಲ್ಲಿ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸುವುದಾಗಿ ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಪ್ರತಿದಿನ ಪುನರ್ ವಿಮರ್ಶೆ ಮಾಡಲಾಗುತ್ತಿದ್ದು, ಸುಪ್ರೀಂಕೋರ್ಟ್ ಭದ್ರತಾ ಏಜೆನ್ಸಿಯನ್ನು ನಂಬಬೇಕು ಎಂದು ಕೇಂದ್ರ ಸುಪ್ರೀಂಗೆ ನೀಡಿದ ಉತ್ತರದಲ್ಲಿ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೂಡಲೇ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಾಶ್ಮೀರ ಟೈಮ್ಸ್ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕಾಶ್ಮೀರದಲ್ಲಿ ಸ್ಥಳೀಯ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸೋಮವಾರ ಶಾಲಾ, ಕಾಲೇಜು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯಾಚರಿಸಲಿದೆ ಎಂದು ಉನ್ನತ ಮೂಲಗಳು ಎನ್ ಡಿಟಿವಿಗೆ ತಿಳಿಸಿರುವುದಾಗಿ ವರದಿ ಮಾಡಿದೆ.