(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆಗಸ್ಟ್.14.ಕಳೆದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಎರಡೂ ದೇಶಗಳ ವಾಯುಪಡೆಗಳ ನಡುವೆ ಆಗಸದಲ್ಲಿ ಯುದ್ಧವಿಮಾನಗಳ ಮೇಲಾಟ ನಡೆದಿತ್ತು. ಈ ಸಂದರ್ಭದಲ್ಲಿ ಅಭಿನಂದನ್ ವರ್ತಮಾನ್ ಅವರು ಪಾಕಿಸ್ಥಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಕಳೆದ ಮಾರ್ಚ್ ತಿಂಗಳಲ್ಲಿ ಪಾಕಿಸ್ಥಾನದಿಂದ ಭಾರತಕ್ಕೆ ಹಸ್ತಾಂತರಗೊಂಡ ಬಳಿಕ ಅಭಿನಂದನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಹಾಗೂ ಅವರನ್ನು ವಿಸ್ತೃತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅಭಿನಂದನ್ ಅವರು ಎಲ್ಲಾ ವೈದ್ಯಕೀಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವುದಾಗಿ ತಿಳಿದುಬಂದಿದೆ. ಮತ್ತು ಅವರು ವಾಯುಪಡೆಯ ಸೇವೆಗೆ ಮರಳಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಪುಲ್ವಾಮ ದಾಳಿಗೆ ಪ್ರತಿಯಾಗಿ ಭಾರತ ಬಾಲಾಕೋಟ್ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ಥಾನ ನಡೆಸಲು ಉದ್ದೇಶಿಸಿದ್ದ ಪ್ರತೀಕಾರ ಕ್ರಮವನ್ನು ನಮ್ಮ ವಾಯುಪಡೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಆದರೆ ಈ ಘಟನೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದೊಳಗೆ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ -21 ಯುದ್ಧ ವಿಮಾನ ಪತನಗೊಂಡಿತ್ತು. ಅಭಿನಂದನ್ ಅವರು ತನ್ನ ವಿಮಾನದಿಂದ ಜಿಗಿದು ಭಾರತದ ನೆಲದೆಡೆಗೆ ಹಿಂತಿರು ಬರುವ ಯತ್ನದಲ್ಲಿದ್ದಾಗ ಸ್ಥಳಿಯರು ಅವರನ್ನು ಹಿಡಿದು ಪಾಕಿಸ್ಥಾನ ಸೇನೆಯ ವಶಕ್ಕೆ ಒಪ್ಪಿಸಿದ್ದರು.
ಪಾಕಿಸ್ಥಾನ ಸೇನೆಯ ಅಧಿಕಾರಿಗಳು ಅಭಿನಂದನ್ ಅವರ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ವರ್ತಮಾನ್ ಅವರು ತನ್ನ ಪರಿಚಯವನ್ನು ಹೊರತುಪಡಿಸಿ ಸೇನೆಗೆ ಸಂಬಂಧಿಸಿದ ಇನ್ನುಳಿದ ಯಾವ ಮಾಹಿತಿಯನ್ನೂ ನೀಡದೆ ದಿಟ್ಟತನವನ್ನು ಮೆರೆದಿದ್ದರು.ಅಭಿನಂದನ್ ಅವರನ್ನು ಬಂಧಿಸಿ ಬಳಿಕ ಅವರನ್ನು ವಿಚಾರಣೆ ನಡೆಸುವ ವಿಡಿಯೋ ಪಾಕಿಸ್ಥಾನ ಕಡೆಯಿಂದ ಎಲ್ಲೆಡೆ ವೈರಲ್ ಗೊಂಡ ಬಳಿಕ ಭಾರತ ತನ್ನ ಚತುರ ರಾಜತಾಂತ್ರಿಕ ನಡೆಯ ಮೂಲಕ ಪಾಕಿಸ್ಥಾನ ಸರಕಾರದ ಮೇಲೆ ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವನ್ನು ಹೇರಿ ಅಭಿನಂದನ್ ಅವರನ್ನು ಎರಡೇ ದಿನಗಳಲ್ಲಿ ಭಾರತಕ್ಕೆ ವಾಪಾಸು ಕರೆಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಫೆಬ್ರವರಿ 27ರಂದು ಪಾಕಿಗಳ ಕೈಯಲ್ಲಿ ಸೆರೆಯಾದ ಅಭಿನಂದನ್ ಮಾರ್ಚ್ 01ರಂದು ವಾಘಾ-ಅಟ್ಟಾರಿ ಗಡಿ ಮೂಲಕ ಪಾಕಿಸ್ಥಾನ ಅಧಿಕಾರಿಗಳಿಂದ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದರು. ಅಂದಿನಿಂದ ಅಭಿನಂದನ್ ವರ್ತಮಾನ್ ಅವರು ಭಾರತೀಯರ ಕಣ್ಮಣಿಯಾಗಿ ರೂಪುಗೊಂಡಿದ್ದರು. ಅತ್ತ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರೂ ಸಹ ಎರಡು ರಾಷ್ಟ್ರಗಳ ನಡುವೆ ಉಂಟಾಗಿರುವ ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ಸೌಹಾರ್ಧತೆಯ ಸಂಕೇತವಾಗಿ ಅಭಿನಂದನ್ ಅವರನ್ನು ಬಿಡುಗಡೆಗೊಳಿಸುತ್ತಿರುವುದಾಗಿ ಹೇಳಿಕೊಂಡಿದ್ದರು.ಇಂತಹ ಸಾಹಸವನ್ನು ಮಾಡಿದ ಕೆಚ್ಚೆದೆಯ ವೀರನಾದ ಅಭಿನಂದನ್ ಗೆ ಆಗಸ್ಟ್.15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ವೀರ ಚಕ್ರ’ ಪುರಸ್ಕಾರ ನೀಡಿ ಗೌರವಿಸಲಾಗುವುದು,ಎಂದು ವರದಿ ಮೂಲಗಳು ತಿಳಿಸಿವೆ.