(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜೂನ್.24.ರಾಷ್ಟ್ರಪತಿ ರಾಮನಾಥ ಕೋವಿಂದ್, ಸ್ವಾತಂತ್ರ್ಯ ಬಂದ ಅಮೃತ ಮಹೋತ್ಸವ ವೇಳೆ ನವಭಾರತ ನಿರ್ಮಾಣ ಸಾಕಾರಗೊಳಿಸಲು 12 ಸಂಕಲ್ಪಗಳ ಪಟ್ಟಿ ನೀಡಿದ್ದಾರೆ. ಈ ಮೂಲಕ ಮೋದಿ ಸರ್ಕಾರದ ಮುಂದಿನ ಐದು ವರ್ಷದ ಆಡಳಿತದ ಪಥವನ್ನು ತೆರೆದಿಟ್ಟಿದ್ದಾರೆ.
ಆಡಳಿತ, ಆರ್ಥಿಕ, ಮೂಲಸೌಕರ್ಯ, ಸಾಮಾಜಿಕ ಅಭಿವೃದ್ಧಿ ಸೇರಿ ಇತರ ವಿಚಾರಗಳ ಕುರಿತು ಮೋದಿ ಸರ್ಕಾರದ ಗುರಿಯನ್ನು ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ವಿವರಿಸಿದ್ದಾರೆ. ಒಂದು ದೇಶ- ಒಂದು ಚುನಾವಣೆ, ದಿಢೀರ್ ತ್ರಿವಳಿ ತಲಾಕ್, ನಿಕಾಹ್ ಹಲಾಲ್ ನಿಷೇಧಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ರಾಷ್ಟ್ರಪತಿ ಉಲ್ಲೇಖಿಸಿದ್ದಾರೆ. ಆದರೆ ಬಹುನಿರೀಕ್ಷಿತ ಸಂವಿಧಾನದ 370ನೇ ವಿಧಿ ರದ್ದತಿ ವಿಚಾರ ಮಾತ್ರ ಈ ಬಾರಿಯೂ ಭಾಷಣದಲ್ಲಿ ಉಲ್ಲೇಖವಾಗಿಲ್ಲ.ಗ್ರಾಮ ಪಂಚಾಯಿತಿಯಿಂದ ರಾಜ್ಯ ಸರ್ಕಾರ ವರೆಗಿನ ನೆರವು ಪಡೆದು ಸರ್ಕಾರ ಜಲಶಕ್ತಿ ನಿರ್ವಹಣೆಗೆ ಕೆಲಸ ಮಾಡಲಿದೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯತ್ತ ಗಮನವಹಿಸಲಿದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.
ನುಸುಳುಕೋರರ ಸಮಸ್ಯೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಎನ್ಆರ್ಎಸ್ ಆರಂಭಿಸಲಾಗುವುದು. ಹಂತಹಂತವಾಗಿ ಈ ರಾಜ್ಯಗಳಲ್ಲಿ ಎನ್ಆರ್ಸಿಗೆ ಸರ್ಕಾರ ಚಾಲನೆ ನೀಡಲಿದೆ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ, ಮುದ್ರಾ, ಜನಧನ, ಉಜ್ವಲ, ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ್, ಸಣ್ಣ ವ್ಯಾಪಾರಿ, ರೈತರಿಗೆ ಪಿಂಚಣಿ ಸೇರಿ ಇತರ ಪ್ರಮುಖ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಪಥದಲ್ಲಿ ಸಾಗುತ್ತಿದ್ದು ಸಬ್ ಕಿ ವಿಶ್ವಾಸ್ ಎನ್ನುವುದು ಮುಂದಿನ 5 ವರ್ಷದ ಗುರಿಯಾಗಿದೆ ಎಂದರು.ನೀರಿನ ಮೂಲ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ ಜಲಶಕ್ತಿ ಸಚಿವಾಲಯ ಆರಂಭಿಸಲಾಗಿದೆ.