(ನ್ಯೂಸ್ ಕಡಬ) newskadaba.com ನವದೆಹಲಿ, ಜೂನ್.6. (ಸೆಲ್ ಫೋನ್) ಅಂದರೆ ಮೊಬೈಲ್ ಈ ಉಪಕರಣವು ಎಷ್ಟು ಉಪಯುಕ್ತವೋ ಅಷ್ಟೇ ಹಾನಿಕಾರಕವು ಹೌದು. ಸಣ‍್ಣ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಒಳ‍್ಳೆಯದಲ್ಲ ಎನ್ನುವುದಕ್ಕೆ ಈ ಘಟನೆ ಒಂದು ಪ್ರತ್ಯಕ್ಷ ಸಾಕ್ಷಿ.
12 ವರ್ಷದ ಬಾಲಕನೊಬ್ಬ ಮೊಬೈಲ್ ಸ್ಫೋಟಗೊಂಡ ಪರಿಣಾಮ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಧಾರ್ ಜಿಲ್ಲೆಯ ಬದ್ನಾವರ್ ನಗರದಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಲಿಖೇಡಿ ಗ್ರಾಮದ ಬಾಲಕ ಲಖನ್(12ವರ್ಷ) ಮೃತಪಟ್ಟ ದುರ್ದೈವಿ ಎಂದು ವರದಿ ತಿಳಿಸಿದೆ. ಲಖನ್ ಮೊಬೈಲ್ ಅನ್ನು ಚಾರ್ಜ್ ಗೆ ಹಾಕಿದ ವೇಳೆ ಏಕಾಏಕಿ ಬ್ಯಾಟರಿ ಸ್ಫೋಟಗೊಂಡಿತ್ತು.
ಶಬ್ದ ಕೇಳಿದ ಕೂಡಲೇ ಆತನ ಚಿಕ್ಕಪ್ಪ ಮನೆಯೊಳಗೆ ಹೋದಾಗ ಬಾಲಕ ನೆಲದ ಮೇಲೆ ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಖನ್ ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಸಿಬಿ ಸಿಂಗ್ ತಿಳಿಸಿದ್ದಾರೆ.ಮೊಬೈಲ್ ಸ್ಫೋಟಗೊಂಡ ತೀವ್ರತೆಗೆ ಸ್ವಿಚ್ ಬೋರ್ಡ್ ಧ್ವಂಸಗೊಂಡಿರುವುದಾಗಿ ಹುಡುಗನ ಸಂಬಂಧಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಬಾಲಕನ ಶವವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.