(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.6. ಅರಮನೆ ಮೈದಾನದಲ್ಲಿ ಬುಧವಾರದಂದು ನಡೆದ ಸಭೆಯಲ್ಲಿ ಬಿಜೆಪಿ ಸಂಸದರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಕಾಂಗ್ರೆಸ್ ಬಿಟ್ಟು ನಮ್ಮಲ್ಲಿ ಬಂದವರಿಗೆ ಏನು ಸಿಗಲಿದೆ ಎಂಬುದಕ್ಕೆ ಸಂಸದ ಡಾ.ಉಮೇಶ್ ಜಾಧವ್ ಅವರೇ ಉದಾಹರಣೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ.
ಪಕ್ಷ ತೊರೆದು ಬಿಜೆಪಿಗೆ ಬಂದರೆ ಇಲ್ಲಿ ಶೇ.100ರಷ್ಟು ಫಲಿತಾಂಶ ಖಾತರಿ ಇರಲಿದೆ. ಕಾಂಗ್ರೆಸ್‌ನಲ್ಲಿ ಇದ್ದರೆ ಯಾವುದೇ ಪ್ರಯೋಜನವಾಗದು. ಬದಲಿಗೆ ದೇಶದ ಒಳಿತು, ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವವರು ಬಿಜೆಪಿಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.ಕಾಂಗ್ರೆಸ್‌ನ ಸೋಲಿಲ್ಲದ ಸರದಾರರೆನಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿಯಂಥವರು ಸೋತಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದಾಗಿ ಹೆಚ್ಚು ಸ್ಥಾನ ಗೆಲ್ಲಲಿದ್ದು, ಬಿಜೆಪಿ ಏಳು ಸ್ಥಾನಕ್ಕೆ ಕುಸಿಯಲಿದೆ ಎಂದು ಚುನಾವಣೆ ವೇಳೆ ಹೇಳಲಾಗುತ್ತಿತ್ತು.
ಮೋದಿಯವರು ಮತ್ತೆ ಪ್ರಧಾನಿಯಾಗುವುದಿಲ್ಲ ಎಂಬ ಅಪಪ್ರಚಾರವೂ ನಡೆಯಿತು. ಆದರೆ ಚುನಾವಣೆ ಬಳಿಕ ಸನ್ಯಾಸಿಯಂತಿದ್ದವರು ರಾಜರಾದರು. ಗೃಹಸ್ಥರಾದವರು ಸನ್ಯಾಸಿಯಾಗುವಂತಾಯಿತು. ರಾಹುಲ್ ಗಾಂದಿ, ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ ಅವರು ರಾಜಕೀಯ ಸನ್ಯಾಸ ಸ್ವೀಕರಿಸುವ ಪರಿಸ್ಥಿತಿ ಬಂತು. ದೇವೇಗೌಡರು ಮುಂದೆಂದೂ ಚುನಾವಣೆಗೆ ಸ್ಪರ್ಧಿಸಬಾರದೆಂಬಂತೆ ಸೋಲಿಸುವ ಮೂಲಕ ಜನ ತೀರ್ಪು ನೀಡಿದ್ದಾರೆ ಎಂದು ತಿಳಿಸಿದರು.ರಾಜ್ಯದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.41ರಷ್ಟು ಮತ ಪಡೆದಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಶೇ.51.4ರಷ್ಟು ಮತ ಪಡೆದಿದೆ. 155 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಮತ ಗಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸಿದೆ.
ಮುಂದಿನ 50 ವರ್ಷಗಳ ಕಾಲ ಇದೇ ರೀತಿಯ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದು ಹೇಳಿದರು.ಜನರೇ ‘ಆಪರೇಷನ್ ಕರ್ನಾಟಕ’ ಮಾಡುತ್ತಿದ್ದಾರೆ: ಲೋಕಸಭಾ ಚುನಾವಣೆಗೂ ಮೊದಲೇ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಕಾಂಗ್ರೆಸ್, ಜೆಡಿಎಸ್ ಅನ್ನು ಜನ ತಿರಸ್ಕರಿಸಿದ್ದಾರೆ. ಹಾಗಾಗಿ ಒಂದು ದಿನವೂ ಅಧಿಕಾರದಲ್ಲಿ ಮುಂದುವರಿಯಲು ಮೈತ್ರಿ ಪಕ್ಷಗಳಿಗೆ ನೈತಿಕತೆ ಇಲ್ಲ. ‘ಆಪರೇಷನ್ ಕಮಲ’ ನಡೆಸುವ ಅಗತ್ಯವೇ ಇಲ್ಲ. ರಾಜ್ಯದ ಜನರೇ ‘ಆಪರೇಷನ್ ಕರ್ನಾಟಕ’ ಮಾಡುತ್ತಿದ್ದಾರೆ. ಹಾಗಾಗಿ ಸರ್ಕಾರ ಯಾವಾಗಲಾದರೂ ಬೀಳಬಹುದು. ಪಕ್ಷ ಬಿಟ್ಟು ಬಂದವರ ಭವಿಷ್ಯ ಉತ್ತಮವಾಗಿರಲಿದೆ ಎಂದು ಪರೋಕ್ಷ ಆಹ್ವಾನ ನೀಡಿದರು.