ನಗರಾಭಿವೃದ್ಧಿ ಇಲಾಖೆಯಿಂದ ಹೊಸ ಮೊಬೈಲ್ ಟವರ್ ನೀತಿ ಜಾರಿ➤ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.4.ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ರಾಜ್ಯದಲ್ಲಿ ಮೊಬೈಲ್ ಟವರ್‌ಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಹೊಸ ಮೊಬೈಲ್‌ ಟವರ್‌ ನೀತಿಯನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.

ಹೊಸ ಟವರ್‌ ಅಳವಡಿಕೆ ನೀತಿ ಬಗ್ಗೆ ಅಧಿಸೂಚನೆ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆ, ಮೊಬೈಲ್‌ ಟವರ್‌ ಅಳವಡಿಕೆಗೆ ಹಲವು ಷರತ್ತುಗಳನ್ನು ಹೇರಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.   ಹೊಸ ನೀತಿ ಪ್ರಕಾರ ವಸತಿ ಪ್ರದೇಶಗಳಲ್ಲಿ ಟವರ್‌ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ವಸತಿ ಪ್ರದೇಶದಲ್ಲಿ ಟವರ್‌ ಅಳವಡಿಕೆಯನ್ನು ತಪ್ಪಿಸಲು ಸಾಧ್ಯವಾಗದೆ ಹೋದರೆ, ಸಂಬಂಧಿತ ಮಂಜೂರಾತಿ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ.

ಅಧಿಸೂಚನೆಯಂತೆ ಮೊಬೈಲ್ ಟವರ್‌ ಅಳವಡಿಕೆಗೆ ಆಯಾ ಪ್ರದೇಶದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಪಾಲಿಕೆಗಳ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದರು. ವಾಣಿಜ್ಯ ಪ್ರದೇಶ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಟವರ್‌ ಅಳವಡಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು.ಟವರ್‌ ಅಳವಡಿಕೆಗೆ ಅನುಮತಿ ಪಡೆಯಲು ಯೋಜನಾ ನಕ್ಷೆ ಹಾಗೂ ದಾಖಲಾತಿಗಳನ್ನು ಸಂಬಂಧ ಪಟ್ಟ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಬೇಕು.ದಾಖಲಾತಿಗಳು ಕ್ರಮಬದ್ಧವಾಗಿದ್ದರೆ 30 ದಿನಗಳಲ್ಲಿ ಟವರ್‌ ಅಳವಡಿಕೆಗೆ ಅನುಮತಿ ನೀಡಬೇಕು. ಈಗಾಗಲೇ ಅಳವಡಿಕೆಯಾಗಿರುವ ಟವರ್‌ಗಳು ಮೂರು ತಿಂಗಳಲ್ಲಿ ನೋಂದಣಿ ಮಾಡಬೇಕು.

Also Read  ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು !!

ಇಲ್ಲವಾದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನದಿಯ 6 ಮೀಟರ್‌, ಕೆರೆಯ 5 ಮೀಟರ್‌, ನಾಲೆ ಹಾಗೂ ಕಾಲುವೆಯ 5 ಮೀಟರ್‌ ವ್ಯಾಪ್ತಿಯೊಳಗೆ ಟವರ್‌ ಅಳವಡಿಕೆ ಮಾಡುವಂತಿಲ್ಲ ಎಂದು ಹೇಳಿದರು.ಶಾಲೆ, ಆಸ್ಪತ್ರೆ, ದೇವಾಲಯಗಳ 50 ಮೀಟರ್‌ ವ್ಯಾಪ್ತಿಯೊಳಗೆ ಟವರ್‌ ಅಳವಡಿಕೆಗೆ ನಿರ್ಬಂಧ ಹೇರಲಾಗಿದೆ. ಪುರಾತತ್ವ, ಧಾರ್ಮಿಕ ಕಟ್ಟಡಗಳ 100 ಮೀಟರ್‌ ವ್ಯಾಪ್ತಿಯೊಳಗೆ ಟವರ್‌ ಅಳವಡಿಕೆ ಮಾಡುವಂತಿಲ್ಲ. ಸಾರ್ವಜನಿಕರ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾ, ರಾಜ್ಯ ಮಟ್ಟದ ಸಮಿತಿ ಹಾಗೂ ಕೇಂದ್ರ ಸರ್ಕಾರದ ನಾಮನಿರ್ದೇಶಿತರನ್ನು ನೇಮಿಸಲಾಗುವುದು ಎಂದು ತಿಳಿಸಿದರು.

Also Read  ಸಾಲು ಸಾಲು ರಜೆಗಳಿಂದಾಗಿ ನಾಳೆಯಿಂದ ಬ್ಯಾಂಕ್ ವ್ಯವಹಾರ ಸ್ಥಗಿತ ► ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಇಂದೇ ಮುಗಿಸಿಬಿಡಿ

error: Content is protected !!
Scroll to Top