ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆರಂಭವಾಗಲಿದೆ ಎಲ್ಕೆಜಿ, ಯುಕೆಜಿ ➤ಅಂಗನವಾಡಿಗಳಿಗೆ ಈಗ ಅಳಿವು ಉಳಿವಿನ ಪ್ರಶ್ನೆ!

 

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.29.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಬರುವ ಅಂಗನವಾಡಿಗಳಿಗೆ ಅಳಿವು ಉಳಿವಿನ ಪ್ರಶ್ನೆಯನ್ನೇ ಹುಟ್ಟು ಹಾಕಿದೆ.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಮತ್ತು ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಬೆಳೆಸಲು ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯನ್ನು (ಎಲ್ಕೆಜಿ, ಯುಕೆಜಿ) ಆರಂಭಿಸುತ್ತಿರುವುದರಿಂದ ರಾಜ್ಯದಲ್ಲಿನ 1,500ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.2019-20ನೇ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸುತ್ತಿದೆ. ಹಾಗೆಯೇ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಇದು. ತಾಲೂಕಿಗೆ ಒಂದರಂತೆ ಗ್ರಾಪಂ ಕೇಂದ್ರದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿ ತೆರೆಯಲಾಗುತ್ತದೆ.ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಂಗನವಾಡಿಗಳನ್ನು 4,100 ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ, ‘ಬಾಲಸ್ನೇಹಿ ಕೇಂದ್ರ’ಗಳನ್ನಾಗಿ ಬಲವರ್ಧಿಸಲು ಸರ್ಕಾರ ಯೋಜನೆ ರೂಪಿಸಿದೆ.

ಹಂತ ಹಂತವಾಗಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವುದಕ್ಕೂ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ, ಬಾಲವಾಡಿಗಳು ಮುಚ್ಚಿದ ರೀತಿಯಲ್ಲೇ ಅಂಗನವಾಡಿಗಳು ಮುಚ್ಚಬಹುದಾದ ಆತಂಕ ಅಂಗನವಾಡಿಯ ಕಾರ್ಯಕರ್ತೆಯರಲ್ಲಿ ಮೂಡಿದೆ. 3 ವರ್ಷದ ಒಳಗಿನ 26 ಲಕ್ಷ ಮಕ್ಕಳು ಮತ್ತು 3ರಿಂದ 6 ವರ್ಷದ ಒಳಗಿನ 16.5 ಲಕ್ಷ ಮಕ್ಕಳು ರಾಜ್ಯದ ಸುಮಾರು 62,580 ಅಂಗನವಾಡಿ ಕೇಂದ್ರಗಳಲ್ಲಿ ಇದ್ದಾರೆ. ಸರ್ಕಾರ ಪ್ರತಿವರ್ಷ ಐಸಿಡಿಎಸ್‌ ಯೋಜನೆಯ ಮೂಲಕ ಅಂಗನವಾಡಿಗಳಿಗೆ 4,200 ಕೋಟಿ ರೂ.ವ್ಯಯಿಸುತ್ತಿದೆ. ಈಗ ಪಬ್ಲಿಕ್‌ ಶಾಲೆಗಳಿಗೆ ಅಂಗನವಾಡಿ ಮಕ್ಕಳನ್ನು ಸ್ಥಳಾಂತರ ಮಾಡುವುದರಿಂದ ಅಲ್ಲಿನ ಶಿಕ್ಷಕರಿಗೆ ಪ್ರತ್ಯೇಕ ಸಂಬಳ, ಅಡುಗೆ ಕೋಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಸದಾಗಿ ನಿರ್ಮಿಸಿ ಕೊಡಬೇಕಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಕೋಟ್ಯಂತರ ರೂ.ವ್ಯಯಿಸಬೇಕಿದೆ.

Also Read  ನಿಷೇಧಿತ PFI ಮರು ಸ್ಥಾಪನೆಗೆ ಯತ್ನ ➤ 4 ರಾಜ್ಯಗಳಲ್ಲಿ ಮತ್ತೆ NIA ದಾಳಿ

ಅಲ್ಲದೆ, ಮಕ್ಕಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗೆ ಸ್ಥಳಾಂತರಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿರುವ ಬಗ್ಗೆಯೂ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಅಂಗನವಾಡಿ ಮಕ್ಕಳನ್ನು ಸ್ಥಳಾಂತರ ಮಾಡುವುದು ಅವೈಜ್ಞಾನಿಕ. ಪ್ರಾಥಮಿಕ ಶಾಲೆಯ ಮಕ್ಕಳ ವರ್ತನೆ ಭಿನ್ನವಾಗಿರುತ್ತದೆ. ಆ ಮಕ್ಕಳೊಂದಿಗೆ ಇಳಿ ವಯಸ್ಸಿನ ಮಕ್ಕಳನ್ನೂ ಸೇರಿಸುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಮಕ್ಕಳ ಆಹಾರ ಶೈಲಿಯೂ ಭಿನ್ನವಾಗಿರುತ್ತದೆ. ಅಂಗನವಾಡಿ ಮಕ್ಕಳಿಗೆ ಆಹಾರ ಮತ್ತು ನಿದ್ರೆ ಮೊದಲ ಆದ್ಯತೆ ಎಂದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.

ಯೋಜನೆ ಹಿಂಪಡೆಯಲು ಜೂ.10ಕ್ಕೆ ಪ್ರತಿಭಟನೆ:

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವ ಯೋಜನೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ನೇತೃತ್ವದಲ್ಲಿ ಜೂನ್‌.10ಕ್ಕೆ ಟೌನ್‌ಹಾಲ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷ ಜಿ.ಆರ್‌.ಶಿವಶಂಕರ್‌ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಾಲೆಯಲ್ಲೇ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವುದರಿಂದ ಅಂಗನವಾಡಿಗಳ ಮೇಲೆ ನೇರಪರಿಣಾಮ ಬೀರಲಿದೆ.

Also Read  ಸ್ಕೂಟರ್ ಗೆ ಟ್ರಕ್ ಢಿಕ್ಕಿ ➤ ಸವಾರ ಮೃತ್ಯು

ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವ ಮುನ್ನ ‘ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ-2017’ರ ವರದಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಅಂಗನವಾಡಿಯಲ್ಲಿರುವ ಮಕ್ಕಳು ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಬೇರೆಯುವ ಸಾಧ್ಯತೆ ಕಡಿಮೆ. ಸರ್ಕಾರದ ನಿರ್ಧಾರದಿಂದ ಅಂಗನವಾಡಿಗಳ ಅಸ್ತಿತ್ವದ ಪ್ರಶ್ನೆಯೂ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರದ ಆದೇಶದಿಂದ ಮೂರುವರೆ ವರ್ಷದಿಂದ ಆರು ವರ್ಷದೊಳಗಿನ ಎಲ್ಲ ಮಕ್ಕಳು ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಇದರಿಂದ ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳೇ ಇರುವುದಿಲ್ಲ.

ಅಂಗನವಾಡಿ ಕಾರ್ಯಕರ್ತೆಯರು ಬೀದಿ ಪಾಲಾಗುತ್ತಾರೆ. ಸರ್ಕಾರ ಹಲವು ಅಂಗನವಾಡಿಗಳ ಬಾಡಿಗೆಯನ್ನೇ ನೀಡಿಲ್ಲ. ಈಗ ಹೊಸ ಯೋಜನೆಯನ್ನೇ ಪ್ರಾರಂಭಿಸಿದೆ. ಎಲ್ಲ ಮೂಲಭೂತ ಸೌಕರ್ಯವನ್ನು ಅಂಗನವಾಡಿ ಕೇಂದ್ರಗಳಿಗೆ ಒದಗಿಸಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಅಧಿಕೃತ ಕೆಲಸ ವಹಿಸಬೇಕು. ಇವರ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಲು ಸೂಕ್ತ ತರಬೇತಿ ನೀಡಿ ಅಂಗನವಾಡಿ ಕೇಂದ್ರಗಳನ್ನೇ ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಒತ್ತಾಯಿಸಿದರು.

Also Read  ಜೂನ್ 21 ರಂದು ವಿಶ್ವಯೋಗ ದಿನಾಚರಣೆ

error: Content is protected !!
Scroll to Top