( ನ್ಯೂಸ್ ಕಡಬ) ಮೇ 8, ಹೊಸದಿಲ್ಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರ ಅಡಗುತಾಣದ ಮೇಲೆ ವೈಮಾನಿಕ ದಾಳಿ ನಡೆಸಿ ಯಶಸ್ವಿಯಾದ ಬಳಿಕ ಇದೀಗ ಭಾರತೀಯ ವಾಯುಪಡೆ ಇಸ್ರೇಲ್ ನಿರ್ಮಿತ ನೂತನ ಅವತರಣಿಕೆಯ(ಶ್ರೇಣಿ) ಬಂಕರ್ ಬಸ್ಟರ್ ಸ್ಪೈಸ್-2000 ಬಾಂಬ್ ಅನ್ನು ಖರೀದಿಸಲು ಚಿಂತನೆ ನಡೆಸಿದೆ ಎಂದು ವರದಿ ತಿಳಿಸಿದೆ.ನೂತನ ಅವತರಣಿಕೆಯ ಸ್ಪೈಸ್-2000 ಬಾಂಬ್ ಬಳಸುವುದರಿಂದ ಶತ್ರುಗಳ ಅಡಗುತಾಣ, ಕಟ್ಟಡಗಳನ್ನು ಕೆಲವು ಸೆಕೆಂಡುಗಳಲ್ಲಿ ಧ್ವಂಸಗೊಳಿಸಬಹುದಾಗಿದೆ. ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಜೈಶ್ ಉಗ್ರರ ಅಡಗುತಾಣದ ಮೇಲೆ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ವೇಳೆ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಸ್ಪೈಸ್ 2000 ಬಾಂಬ್ ಅನ್ನು ಉಪಯೋಗಿಸಿತ್ತು ಎಂಬುದು ಗಮನಾರ್ಹ.
ಆದರೆ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ ಬಳಸಿದ್ದ ಸ್ಪೈಸ್ 2000 ಬಾಂಬ್ ಕಟ್ಟಡ, ಬಂಕರ್ ಗಳನ್ನು ಭೇದಿಸಿ ಒಳಹೋಗುವ ಮಾದರಿಯದ್ದಾಗಿದೆ. ಜೈಶ್ ಕ್ಯಾಂಪ್ ಹಾಗೂ ಕಟ್ಟಡದ ಮೇಲೆ ಬಾಂಬ್ ಹಾಕಲಾಗಿತ್ತು, ಆದರೆ ಕಟ್ಟಡಗಳು ನಾಶವಾಗಲ್ಲ. ಬಾಂಬ್ ಒಳಗೆ ಹೋಗಿ ಸ್ಫೋಟಗೊಳ್ಳುವ ಮೂಲಕ ಒಳಗಿದ್ದ ಉಗ್ರರು ಸಾವನ್ನಪ್ಪಿದ್ದರು.ಇದೀಗ ಐಎಎಫ್ ಬಂಕರ್ ಬಸ್ಟರ್ ಅನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸಿದ್ದು, ಈ ನೂತನ ಮಾದರಿಯ ಬಂಕರ್ ಬಸ್ಟರ್ ಕಟ್ಟಡಗಳನ್ನು ನಾಶಗೊಳಿಸಿ ಬಿಡುತ್ತದೆ ಎಂದು ಸರ್ಕಾರದ ಮೂಲಗಳು ಎಎನ್ ಐಗೆ ವಿವರಿಸಿದೆ. ಆ ನಿಟ್ಟಿನಲ್ಲಿ ತುರ್ತು ಅಧಿಕಾರವನ್ನು ಬಳಸಿ ಸ್ಪೈಸ್ 2000 ಬಾಂಬ್ ಅನ್ನು ಖರೀದಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಶತ್ರುದೇಶಗಳ ಯಾವುದೇ ರೀತಿಯ ಬೆದರಿಕೆಯನ್ನು ಎದುರಿಸಲು ನಾವು ಸಿದ್ಧರಾಗಿರಬೇಕಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.