( ನ್ಯೂಸ್ ಕಡಬ) ಮೇ 8, ನವದೆಹಲಿ : ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಚೌಕೀದಾರ್ ಚೋರ್ ಹೈ ಎಂದು ಹೇಳಿದೆ ಎಂಬುದಾಗಿ ತಾನು ತಪ್ಪಾಗಿ ಹೇಳಿರುವುದಕ್ಕೆ ಬುಧವಾರ ಸುಪ್ರೀಂ ಕೋರ್ಟಿನಲ್ಲಿ ನಿಶ್ಶರ್ತ ಕ್ಷಮೆ ಯಾಚಿಸಿದರು.ಮಾತ್ರವಲ್ಲದೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ತನ್ನ ವಿರುದ್ಧ ದಾಖಲಿಸಿರುವ ಕೋರ್ಟ್ ನಿಂದನೆಯ ಕ್ರಿಮಿನಲ್ ಪ್ರಕರಣವನ್ನು ಕೊನೆಗೊಳಿಸಬೇಕೆಂದೂ ರಾಹುಲ್ ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟಿಗೆ ಇಂದು ರಾಹುಲ್ ಗಾಂಧಿ ಸಲ್ಲಿಸಿದ ಮೂರು ಪುಟಗಳ ಹೊಸ ಅಫಿದಾವಿತ್ನಲ್ಲಿ “ಸುಪ್ರೀಂ ಕೋರ್ಟ್ ಬಗ್ಗೆ ನನಗೆ ಅತ್ಯುನ್ನತ ಗೌರವವಿದೆ; ನ್ಯಾಯದಾನ ಪ್ರಕ್ರಿಯೆಯಲ್ಲಿ ತಾನು ಈ ತನಕ ಎಂದು ಕೂಡ ಹಸ್ತಕ್ಷೇಪ ನಡೆಸಿದ್ದಿಲ್ಲ’ ಎಂದು ಹೇಳಿದ್ದಾರೆ.“ರಫೇಲ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಚೌಕೀದಾರ್ ಚೋರ್ ಹೈ ಎಂದು ಹೇಳಿದೆ ಎಂಬುದಾಗಿ ನಾನು ತಪ್ಪಾಗಿ ಹೇಳಿರುವುದಕ್ಕೆ ಉನ್ನತ ನ್ಯಾಯ ಪೀಠದ ಮುಂದೆ ಕ್ಷಮೆ ಕೋರುತ್ತೇನೆ’ ಎಂದು ರಾಹುಲ್ ಗಾಂಧಿ ಅಫಿದಾವಿತ್ ನಲ್ಲಿ ಹೇಳಿದ್ದಾರೆ.