ಬೆಳ್ತಂಗಡಿ: ಸಿಡಿಲು ಬಡಿಯುತ್ತಿದ್ದ ವೇಳೆ ವಿದ್ಯುತ್ ಫ್ಯೂಸ್ ತೆಗೆಯಲು ಹೋದ ಮಹಿಳೆ ➤ ವಿದ್ಯುತ್ ಆಘಾತಕ್ಕೊಳಗಾಗಿ ಪತಿ – ಪತ್ನಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.05. ವಿದ್ಯುತ್ ಆಘಾತಕ್ಕೆ ಒಳಗಾಗಿ ಗಂಡ – ಹೆಂಡತಿ ಮನೆಯಲ್ಲೇ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ಗುರುವಾರ ಸಂಭವಿಸಿದೆ.

ಮೃತ ದಂಪತಿಯನ್ನು ಕೊಕ್ರಾಡಿಯ ಸಂಜೀವ ಮೂಲ್ಯ (55) ಹಾಗು ಅವರ ಪತ್ನಿ ಸರೋಜಿನಿ ಮೂಲ್ಯ (50) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಜೋರಾಗಿ ಸಿಡಿಲು ಬಡಿಯುತ್ತಿದ್ದ ವೇಳೆ ತಮ್ಮ ಮನೆಯ ಸ್ವಿಚ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಸರಬರಾಜು ನಿಲ್ಲಿಸಲೆಂದು ಸರೋಜಿನಿಯವರು ಫ್ಯೂಸ್ ತೆಗೆಯಲು ಹೋಗಿದ್ದರು. ಈ ಸಂದರ್ಭ ಅವರ ದೇಹಕ್ಕೆ ವಿದ್ಯುತ್ ಪ್ರವಾಹವಾಗಿ ಬೊಬ್ಬೆ ಹಾಕಿದ್ದು, ಪತ್ನಿಯ ಚೀರಾಟ ಕೇಳಿ ಸಹಾಯಕ್ಕೆ ಧಾವಿಸಿದ ಪತಿ ಸಂಜೀವ ಮೂಲ್ಯ ಅವರೂ ವಿದ್ಯುತ್ ಅಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಂತ್ರಿಕ ದೋಷವೇ ಈ ಅನಾಹುತಕ್ಕೆ ಕಾರಣವೆಂದು ಹೇಳಲಾಗಿದ್ದು, ಅಕ್ಕಪಕ್ಕದ 5-6 ಮನೆಗಳ ವಯರ್ ಹಾಗೂ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top