(ನ್ಯೂಸ್ ಕಡಬ) newskadaba.com.ನವದೆಹಲಿ,ಜ.09. ಫೇಸ್‍ಬುಕ್ ಮಾಲೀಕತ್ವದ ದೇಶದ ಜನಪ್ರಿಯ ಹಾಗೂ ಹೆಚ್ಚು ಜನರು ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆ್ಯಪ್ ವಾಟ್ಸಪ್, ಹೊಸ ಫೀಚರ್ ಸೇರಿಸಲು ಸಿದ್ಧತೆ ನಡೆಸುತ್ತಿದೆ. ತನ್ನ ಬಳಕೆದಾರರ ಖಾಸಗಿತನ ಹಾಗೂ ಹೆಚ್ಚಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಪ್ ಅತಿ ನೂತನ ಫೀಚರ್ ನ್ನು ಸಿದ್ದಪಡಿಸಿದೆ.ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ಫೀಚರ್ ನ್ನು ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ನಂತರ ಐಓಎಸ್ ಬಳಕೆದಾರರಿಗೆ ಸಿಗಲಿದೆ.
ಈಗಿರುವ ಫೀಚರ್ ನಲ್ಲಿ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಹೀಗಾಗಿ ಖಾಸಗಿತನ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ ಆಗುವುದನ್ನು ತಪ್ಪಿಸಲು ಮತ್ತು ಪ್ರೈವೆಸಿಗಾಗಿ ವಾಟ್ಸಪ್ ಫಿಂಗರ್ ಪ್ರಿಂಟ್ ದೃಢೀಕರಣವನ್ನು ಸೇರಿಸಲು ಮುಂದಾಗಿದೆ. ಇದಲ್ಲದೆ ‘ಫೇಸ್ ಐಡಿ’ ಫೀಚರ್ ಕೂಡಾ ಪರಿಚಯಿಸಲು ಮುಂದಾಗಿದೆ. ವ್ಯಾಟ್ಸಪ್ ಆ್ಯಪ್ ಲಾಕ್-ಅನ್‌ಲಾಕ್ ಮಾಡುವ ಫೀಚರ್ ಆಗಿದ್ದು, ಫೋನ್ ಲಾಕ್ ತೆಗೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಬಳಕೆಯಾಗುವಂತೆ ಇದು ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ಮುಖ ಅಥವಾ ಫಿಂಗರ್ ಪ್ರಿಂಟ್ ಗುರುತು ಸ್ವೀಕರಿಸದಿದ್ದಲ್ಲಿ ಪಾಸ್ಕೋಡ್ ಹಾಕಬೇಕಾಗುತ್ತದೆ ಇದರಿಂದ ಬಳಕೆದಾರರ ಖಾಸಗಿ ಸಂದೇಶಗಳಿಗೆ ಹೆಚ್ಚಿನ ರಕ್ಷಣೆ ದೊರಕಲಿದೆ.

.