ಸೇತುವೆ ಕಾಮಗಾರಿ ನಡೆದರೂ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ, ಈ ವರ್ಷವೂ ನೆರೆ ನೀರಿನ ಭೀತಿ ತಪ್ಪಿಲ್ಲ….!

(ನ್ಯೂಸ್ ಕಡಬ) newskadaba.com ಕಡಬ, ಜು.23. ಇಲ್ಲಿಗೆ ಸಮೀಪದ ಹೊಸಮಠ ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಮುಗಿದರೂ ಸೇತುವೆಯ ಸಂಪರ್ಕ ರಸ್ತೆ ನಿರ್ಮಾಣವಾಗದೆ ಈ ವರ್ಷವೂ ಹೊಸಮಠದ ಹಳೇ ಸೇತುವೆ ಮುಳುಗಡೆಗೊಂಡು ಜನರು ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ.

ಹೊಸ ಸೇತುವೆ ಕಾಮಗಾರಿ ಪುರ್ಣಗೊಂಡರೂ ಸಂಪರ್ಕ ರಸ್ತೆ ನಿರ್ಮಾಣವಾಗದೆ ಈ ವರ್ಷವೂ ಹಳೆ ಸೇತುವೆಯನ್ನು ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ನೆರೆ ಭೀತಿ ಹಾಗೂ ಅಪಾಯ ಇನ್ನೂ ಅಬಾಧಿತವಾಗಿದೆ. ಈ ಭಾಗದ ಜನತೆಯ ಬಹು ನಿರೀಕ್ಷೆಯ ಬೃಹತ್ ಸೇತುವೆ ಕಾಮಗಾರಿ ಕಳೆದ ವರ್ಷವೇ ಒಂದು ಹಂತಕ್ಕೆ ಬಂದು ನಿಂತಿದ್ದರೂ ಸೇತುವೆಯ ಎರಡೂ ತುದಿಗಳಲ್ಲಿ ನಿರ್ಮಾಣವಾಗಬೇಕಾದ ಸಂಪರ್ಕ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಈ ವರ್ಷ ಮಳೆಗಾಲಕ್ಕೆ ಮುನ್ನ ನೂತನ ಸೇತುವೆ ಲೋಕಾರ್ಪಣೆಯಾಗಿ ಉಪಯೋಗಕ್ಕೆ ಬರಬಹುದು ಎಂದು ನಂಬಿದ್ದ ಜನತೆಗೆ ಭ್ರಮ ನಿರಸನವಾಗಿದೆ.

ಇಲಾಖೆಯ ಬೇಜವಾಬ್ದಾರಿ: ಎರಡೂ ಬದಿಯ ಭೂಮಿ ಒತ್ತುವರಿ ಕಾರ್ಯ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದು ಇತ್ತೀಚೆಗಷ್ಟೇ ಕಾನೂನು ತೊಡಕುಗಳು ನಿವಾರಣೆ ಮಾಡಿಕೊಂಡು ಒತ್ತುವರಿ ಕಾರ್ಯ ಪೂರ್ಣಗೊಳಿಸಲು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಕಾಮಗಾರಿ ಪ್ರಾರಂಭವಾಗುವ ವೇಳೆ ಮಳೆಗಾಲದ ಮುನ್ಸೂಚನೆ ದೊರೆತಿದೆ. ಸಂಬಂಧಪಟ್ಟ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಪ್ರಸಕ್ತ ಮಳೆಗಾಲದಲ್ಲಿ ಸೇತುವೆ ಮುಳುಗಡೆಯಾಗುವ ಹಾಗೂ ಆ ಮೂಲಕ ರಸ್ತೆ ಸಂಪರ್ಕ ಕಡಿದು ಹೋಗುವ ಭೀತಿ ಎದುರಾಗಿದೆ.

ಸೇತುವೆಯ ಇತಿಹಾಸ: ದಕ್ಷಿಣ ಭಾರತದ ಅತೀ ದೊಡ್ಡ ದೇವಾಲಯ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಈ ಸೇತುವೆ ಮೈಸೂರು ರಾಜ್ಯ ಆಡಳಿತಾವಧಿಯಲ್ಲಿ 1955 ರಲ್ಲಿ ಗುಂಡ್ಯ ಹೊಳೆಗೆ ಹೊಸಮಠದಲ್ಲಿ ನಿರ್ಮಾಣವಾಯಿತು. ಈ ಮುಳುಗು ಸೇತುವೆ ಅಂದಿನ ಕಾಲಕ್ಕೆ ಬಹುದೊಡ್ಡ ಸೇತುವೆ ಎನಿಸಿಕೊಂಡರೂ ಇದೊಂದು ಮುಳುಗು ಸೇತುವೆಯಾಗಿ ಮಳೆಗಾಲದಲ್ಲಿ ನೆರೆನೀರಿಗೆ ತಾನು ಮುಳುಗುವುದರೊಂದಿಗೆ ತನ್ನನ್ನು ದಾಟುವ ದುಸ್ಸಾಸಕ್ಕೆ ಇಳಿದವರನ್ನೂ ಮುಳುಗಿಸುತ್ತಾ ಆರು ದಶಕಗಳಿಂದ ಈ ಭಾಗದ ಜನರಿಗೆ ದುಸ್ವಪ್ನವಾಗಿ ಕಾಡುತ್ತಾ ತನ್ನ ಅಪಾಯಕಾರಿ ಸ್ವರೂಪವನ್ನು ಮುಂದುವರಿಸುತ್ತಲೇ ಬಂದಿತ್ತು. ಅದೆಷ್ಟೋ ಜೀವಗಳನ್ನು ಬಲಿ ತೆಗೆದುಕೊಂಡು ಇಂದಿನವರೆಗೂ ಆತಂಕ ಮುಂದವರಿದಿದೆ. ಈ ಸರಕಾರಿ ವ್ಯವಸ್ಥೆಯಲ್ಲಿ ಹೊಸ ಸೇತುವೆ ನಿರ್ಮಾಣವಾಗದೆ ಇನ್ನೆಷ್ಟು ಜೀವಗಳ ಬಲಿದಾನವಾಗಬೇಕೋ ಎನ್ನವ ಆತಂಕ ಈ ಭಾಗದ ಜನರಲ್ಲಿ ಮಡಗಟ್ಟಿಯೇ ಇತ್ತು. ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಹೊಸಮಠ ಸೇತುವೆಗೆ ಶೀಘ್ರ ಕಾಯಕಲ್ಪ ನೀಡಬೇಕೆನ್ನುವುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಗೆ ಐದು ವರ್ಷದ ಹಿಂದೆ ಅಂದಿನ ರಾಜ್ಯ ಸರಕಾರ ಅನುದಾನ ಮೀಸಲಿಟ್ಟು ನೂತನ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿತ್ತು. ಕಳೆದ ವಿಧಾನ ಸಭಾ ಚುನಾವಣೆಗೆ ಮೊದಲು ಅಸ್ಥಿತ್ವದಲ್ಲಿದ್ದ ರಾಜ್ಯ ಸರಕಾರ 7.5 ಕೋಟಿ ರೂ ಮಂಜೂರಾತಿ ನೀಡಿತ್ತು. ಟೆಂಡರ್ ಕೂಡಾ ಕರೆಯಲಾಗಿತ್ತು.
ಆದರೆ ಅಧಿಕ ಮೊತ್ತದ ಬಿಡ್ ಹಾಕಿರುವುದರಿಂದ ಟೆಂಡರ್ ಪ್ರಕ್ರಿಯೆ ಮುರಿದು ಬಿದ್ದಿತ್ತು. ಆರು ಬಾರಿ ಟೆಂಡರ್ ಕರೆದರೂ ಅಂತಿಮವಾಗಿರಲಿಲ್ಲ. ಕೊನೆಗೆ ಕಾಸರಗೋಡು ಮೂಲದ ಸುಬ್ರಹ್ಮಣ್ಯದ ಕುಮಾರಧಾರ ಸೇತುವೆ ನಿರ್ಮಾಣ ಮಾಡಿರುವ ಲೂಫ್ ಕನ್ಸ್ಟ್ರಕ್ಷನ್ ಸಂಸ್ಥೆ ಗುತ್ತಿಗೆ ಪಡೆದು ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಸಿ ಸೇತುವೆ ನಿರ್ಮಾಣವಾಗುತ್ತಿದೆ.ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಡಿಯಲ್ಲಿ ಅನುದಾನ ಮಂಜೂರುಗೊಂಡು 2014 ರಲ್ಲಿ ಕಾಮಗಾರಿ ಆರಂಭಗೊಂಡು ಕೊನೆಯ ಹಂತಕ್ಕೆ ತಲುಪಿದೆ. ಹಳೆಯ ಮುಳುಗು ಸೇತುವೆಯಿಂದ ಕೆಳಗಡೆ ತಡೆಬೇಲಿಯನ್ನೊಳಗೊಂಡ ಸುಂದರ ಸೇತುವೆ ನಿರ್ಮಾಣವಾಗಿದೆ. ಹಳೆಯ ಸೇತುವೆಯಿಂದ ನಾಲ್ಕು ಮೀಟರ್ ಎತ್ತರದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ. 125 ಮೀಟರ್ ಉದ್ದ 12 ಮೀಟರ್ ಅಗಲದಲ್ಲಿ ಸೇತುವೆ ಆರು ಪಿಲ್ಲರ್ ಗಳಲ್ಲಿ ಎದ್ದು ನಿಂತಿದೆ. ನಿಗಮದ ನಿಯಮಾನುಸಾರ ನಿಗದಿತ ಸಮಯಕ್ಕೆ, ಹಳೆ ಸೇತುವೆಯನ್ನು ಹಾಗೆಯೇ ಉಳಿಸಿಕೊಂಡು ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ.

Also Read  ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್‍ಗೆ ಅರ್ಜಿ ಆಹ್ವಾನ

ಸುಸಜ್ಜಿತ ಸೇತುವೆ ನಿರ್ಮಾಣವಾದರೂ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡದೆ ಇರುವುದರಿಂದ ಸೇತುವೆ ಆದರೂ ಬಳಕೆ ಮಾಡುವಂತಿಲ್ಲ. ನೂತನ ಸೇತುವೆ ದಕ್ಷಿಣ ಭಾಗದಲ್ಲಿ 7 ಸೆಂಟ್ಸ್‌ ಹಾಗೂ ಪೂರ್ವ ಭಾಗದಲ್ಲಿ 35 ಸೆಂಟ್ಸ್‌ ಜಾಗದ ಒತ್ತುವರಿ ಕಾರ್ಯ ಆಗಬೇಕಿತ್ತು. ದಕ್ಷಿಣ ಭಾಗದ ಒತ್ತುವರಿ ಕಾರ್ಯ ಪೂರ್ಣಗೊಂಡು ಆ ಭಾಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಪೂರ್ವ ಭಾಗದ ಖಾಸಗಿ ಜಾಗದ ಒತ್ತುವರಿ ಕಾರ್ಯ ಇನ್ನೂ ಆಗಿಲ್ಲ. ಇದಕ್ಕೆ ಕಂದಾಯ ಇಲಾಖೆ ತನ್ನ ಕಾರ್ಯವನ್ನು ಮುಗಿಸಿದ್ದರೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮಾತ್ರ ತನ್ನ ಪ್ರಕ್ರಿಯೆಯನ್ನು ವಿಳಂಬ ಮಾಡಿರುವುದರಿಂದ ಈ ಭೂ ಸ್ವಾಧೀನ ಕೆಲಸ ಇನ್ನೂ ಬಾಕಿ ಇದೆ. ಸರಕಾರದ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಮಟ್ಟದಲ್ಲಿನ ಸಮಿತಿಯೊಂದು ಭೂ ಸಂತ್ರಸ್ತರೊಂದಿಗೆ ಸಮಾಲೋಚನೆ ಮಾಡಿ ಭೂಮಿಗೆ ದರ ನಿಗದಿ ಮಾಡಿ ಖರೀದಿ ಮಾಡುವ ರೀತಿಯಲ್ಲಿ ಭೂಸ್ವಾಧೀನ ನಡೆಯಬೇಕಾಗಿದೆ. ಅದೇ ರೀತಿಯಲ್ಲಿ ಅಧಿಕಾರಿಗಳು ಕಾರ್ಯ ಪೃವೃತ್ತರಾದರೂ ಸೇತುವೆಯ ಪೂರ್ವಭಾಗದಲ್ಲಿ ಖಾಸಗಿಯವರು ತಗಾದೆ ತೆಗೆದಿರುವುದರಿಂದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಇದೀಗ ಪೂರ್ವ ಭಾಗದ ಸೇತುವೆ ಸಂಪರ್ಕ ರಸ್ತೆಯ ಡಿಸೈನ್ ಬದಲಾಯಿಸಿ ಹಿಂದೆ ನಿಗದಿಯಾಗಿದ್ದ 35 ಸೆಂಟ್ಸ್‌ ಜಾಗದ ಬದಲು 21 ಸೆಂಟ್ಸ್‌ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕೆ.ಆರ್.ಡಿ.ಸಿಎಲ್ ಅಧಿಕಾರಿಗಳ ಪ್ರಕಾರ ಈ ಬಗ್ಗೆ ಪರಿಷ್ಕೃತ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಲಾಗಿದ್ದು 10-15 ದಿನಗಳ ಒಳಗೆ
ಈ ಜಾಗ ಒತ್ತುವರಿ ಕಾರ್ಯಮುಗಿಯಲಿದೆ. ಒಂದೂವರೆ ತಿಂಗಳಲ್ಲಿ ಕಾಮಗಾರಿ ಪುರ್ಣಗೊಳ್ಳಲಿದೆ. ಆದರೆ ಇನ್ನು ಮಳೆಗಾಲ ಪ್ರಾರಂಭವಾಗುವುದರಿಂದ ಕಾಮಗಾರಿ ಸುಸೂತ್ರವಾಗಿ ಸಾಗಲು ಸಾಧ್ಯವಿಲ್ಲ, ಇನ್ನೇನಿದ್ದರೂ ಬರುವ ಬೇಸಿಗೆ ಕಾಲಕ್ಕೆ ನೂತನ ಸೇತುವೆ ಲೋಕಾರ್ಪಣೆಯಾಗಿ ಬಳಕೆಗೆ ಯೋಗ್ಯವಾಗಲಿದೆ. ಮುಳುಗು ಸೇತುವೆಯ ಅಪಾಯದಿಂದ ದೂರವಾಗಲು ಜನ ಇನ್ನೂ ಒಂದು ವರ್ಷ ಕಾಯಬೇಕಿದೆ.

Also Read  Derwent Mills Industrial Location

ಅನಾಹುತಗಳು: ಹೊಸಮಠ ಸೇತುವೆಯ ಇತಿಹಾಸವನ್ನು ಕೆದಕಿ ನೋಡಿದರೆ ಭೀಕರತೆ ಕಂಡುಬರುತ್ತದೆ. ಸೇತುವೆಯಲ್ಲಿ ನೆರೆ ನೀರು ನಿಂತಾಗ ದಾಟುವ ದುಸ್ಸಾಹಸಕ್ಕೆ ಇಳಿದವರನ್ನು ತನ್ನ ಒಡಲೊಳಗೆ ಸೇರಿಸಿಕೊಂಡಿರುವುದು ಕಣ್ಣ ಮುಂದೆ ಬರುತ್ತದೆ. ಸೇತುವೆ ನಿರ್ಮಾಣವಾಗಿ ಐದೇ ವರ್ಷದಲ್ಲಿ ಅಂದರೆ ಐವತ್ತು ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಓಡಾಟ ಮಾಡುತ್ತಿದ್ದ ಖಾಸಗಿ ಬಸ್ಸ್‌ ಸೇತುವೆ ದಾಟಲು ಹೋಗಿ ನೀರು ಪಾಲಾಗಿ ಓರ್ವ ಪ್ರಥಮವಾಗಿ ಬಲಿಯಾಗಿದ್ದರು. ಬಳಿಕ ಕೆಲವು ವರ್ಷಗಳ ಬಳಿಕ ಸುಬ್ರಹ್ಮಣ್ಯಕ್ಕೆ ಬಂದಿದ್ದ ತಮಿಳು ನಾಡಿನ ಯಾತ್ರರ್ಥಿಗಳು ಸೇತುವೆ ದಾಟಲು ಹೋಗಿ ಇಬ್ಬರು ಯುವಕರು ನೀರು ಪಾಲಾಗಿದ್ದರು. 2006 ರಲ್ಲಿ ಕಡಬಕ್ಕೆ ಸಿಮೆಂಟು ಹೊತ್ತೊಕೊಂಡು ಬರುತ್ತಿದ್ದ ಲಾರಿಯೊಂದು ಸೇತುವೆಯಿಂದ ಕೆಳಕ್ಕೆ ನೀರು ಪಾಲಾಗಿ ನಾಲ್ವರು ಬಡಪಾಯಿಗಳು ನೀರುಪಾಲಾಗಿ ಪ್ರಾಣ ಕಳೆದುಕೊಂಡಿದ್ದರು. ಅಂತೆಯೇ ಅದೆಷ್ಟೋ ಜನ ವಾಹನಗಳು ಆಯ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವುದು ಅಧಿಕೃತವಾಗಿ ಲೆಕ್ಕಕ್ಕೆ ಸಿಕ್ಕಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಇದು ಸುಲಭ ತಾನವಾಗಿ ಅನೇಕರು ಇಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದರು. ಅನೇಕರು ಆತ್ಮ ಹತ್ಯೆ ಯತ್ನಿಸಿ ಸಾರ್ವಜನಿಕರಿಂದಾಗಿ ಪಾರಾದ ಘಟನೆಗಳೂ ಇವೆ.

Also Read  ಹೊಸ್ಮಠ: ಫ್ಯಾನ್ಸಿ ಮತ್ತು ಟೈಲರಿಂಗ್ ಅಂಗಡಿ ಬೆಂಕಿಗಾಹುತಿ ► ಲಕ್ಷಾಂತರ ರೂ. ನಷ್ಟ

ನೂತನ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪುರ್ಣಗೊಂಡಿದೆ, ಸೇತುವೆಯ ಎರಡೂ ತುದಿಯಲ್ಲಿ ಖಾಸಗಿ ಜಾಗದ ಒತ್ತುವರಿ ಕಾರ್ಯದಲ್ಲಿ ದಕ್ಷಿಣ ಭಾಗದ ಜಾಗದ ಒತ್ತುವರಿ ಕಾರ್ಯ ಮುಗಿದಿದೆ. ಇನ್ನೂ ಪುರ್ವ ಭಾಗದಲ್ಲಿ ಸ್ವಲ್ಪ ತಕರಾರು ಇದ್ದದರಿಂದ ವಿಳಂಬವಾಗಿದೆ. ಈ ಬಗ್ಗೆ ಮರು ನಕ್ಷೆ ಮಾಡಿ ಹಿಂದಿನ 35 ಸೆಂಟ್ಸ್‌ ಜಾಗದ ಬದಲು 21 ಸೆಂಟ್ಸ್‌ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ನಿರ್ಧರಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಾಗಿದೆ. ಈ ಕಾರ್ಯ ಮಳೆ ನೀರು ಕಡಿಮೆ ಯಾದ ಕೂಡಲೇ ಪುರ್ತಿಗೊಳಿಸಲಾಗುವುದು.
ಪುಟ್ಟಸ್ವಾಮಿ , ಎ.ಇ.ಇ, ಕೆಆರ್ಡಿಸಿಎಲ್ ಹಾಸನ

error: Content is protected !!
Scroll to Top