(ನ್ಯೂಸ್ ಕಡಬ) newskadaba.com, ನ .27 . ಸಂವಿಧಾನ ದಿನಾಚರಣೆಯ ಅಂಗವಾಗಿ ಮಂಗಳೂರಿನ ವಿಶೇಷ ಕಾರ್ಯಪಡೆ ವತಿಯಿಂದ ಪಣಂಬೂರು ಬೀಚ್ ನಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಣಂಬೂರು ಬೀಚ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಂಡರು.
ಬೀಚ್ ನಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸ ಹಾಗೂ ಇತರೆ ಅನಗತ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು, ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛ ಪರಿಸರ ಕಾಪಾಡುವಂತೆ ಜನರನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕರಾವಳಿ ಭಾಗದಲ್ಲಿ ಕೋಮು ಸಂಘರ್ಷಗಳನ್ನು ತಡೆಗಟ್ಟಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವುದು ವಿಶೇಷ ಕಾರ್ಯಪಡೆಯ ಪ್ರಮುಖ ಗುರಿಯಾಗಿದೆ.
ಕಾರ್ಯಕ್ರಮದಲ್ಲಿ ವಿಶೇಷ ಕಾರ್ಯಪಡೆ ಘಟಕದ ಪೊಲೀಸ್ ಉಪಾಧೀಕ್ಷಕ ಅಂಬರಾಯ ಕಾಮನಮನಿ, ವಿಶೇಷ ಕಾರ್ಯಪಡೆ ಉಡುಪಿ ಕಂಪನಿಯ ಉಸ್ತುವಾರಿ ಅಧಿಕಾರಿ ಸಿದ್ದಯ್ಯ ಆರ್ ಪಿಐ, ದ.ಕ. ಎಸ್ಎಎಫ್ ಕಂಪನಿಯ ಉಸ್ತುವಾರಿ ಅಧಿಕಾರಿ ಅಶೋಕ ಸದಲಗಿ ಪಿಐ ಹಾಗೂ ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.




