
(ನ್ಯೂಸ್ ಕಡಬ) newskadaba.com, ನ .24 . ನವದೆಹಲಿ: ಡೇಟಾ ಸುರಕ್ಷತೆ ಹಾಗೂ ಸೂಕ್ಷ್ಮ ಮಿಲಿಟರಿ ಮಾಹಿತಿಗಳ ಸೋರಿಕೆ ತಡೆಗಟ್ಟುವ ಉದ್ದೇಶದಿಂದ ಭಾರತೀಯ ಸೇನೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸೈನಿಕರು, ಜವಾನರು ಮತ್ತು ಅಧಿಕಾರಿಗಳು ಸೇರಿದಂತೆ ಸೇನಾ ಸಿಬ್ಬಂದಿಗೆ ಒಟ್ಟು 87 ಮೊಬೈಲ್ ಅಪ್ಲಿಕೇಶನ್ಗಳ ಬಳಕೆಯನ್ನು ನಿರ್ಬಂಧಿಸಿದೆ.
ನಿರ್ಬಂಧಿತ ಪಟ್ಟಿಯಲ್ಲಿ ಫೇಸ್ಬುಕ್, ಸ್ನ್ಯಾಪ್ಚಾಟ್, ಟಿಕ್ಟಾಕ್, ಪಬ್ಜಿ, ಟಿಂಡರ್, ಬಂಬಲ್, ಜೂಮ್, ವೈಬರ್ ಸೇರಿದಂತೆ ಹಲವು ಜನಪ್ರಿಯ ಆ್ಯಪ್ಗಳು ಸೇರಿವೆ.ಸಂದೇಶ ವಿನಿಮಯ, ಸಾಮಾಜಿಕ ಜಾಲತಾಣ, ಆನ್ಲೈನ್ ಶಾಪಿಂಗ್, ಗೇಮಿಂಗ್, ಡೇಟಿಂಗ್, ವಿಡಿಯೋ ಹಂಚಿಕೆ ಹಾಗೂ ವೆಬ್ ಬ್ರೌಸಿಂಗ್ ವಿಭಾಗಗಳ ಆ್ಯಪ್ಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಶೇರ್ಇಟ್, ಕ್ಸೆಂಡರ್, ಜಪ್ಯಾ, ಲೈಕೀ, ಬಿಗೊ ಲೈವ್, ವಿಮೇಟ್ ಸೇರಿದಂತೆ ಹಲವು ವಿಡಿಯೋ ಮತ್ತು ಫೈಲ್ ಹಂಚಿಕೆ ಆ್ಯಪ್ಗಳೂ ಈ ಪಟ್ಟಿಯಲ್ಲಿವೆ.ಈ ಆ್ಯಪ್ಗಳ ಬಳಕೆಯಿಂದ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಹಾಗೂ ದುರುಪಯೋಗವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸಿಬ್ಬಂದಿ ತಮ್ಮ ಮೊಬೈಲ್ ಸಾಧನಗಳಲ್ಲಿ ಇವುಗಳನ್ನು ಬಳಸದಂತೆ ಭಾರತೀಯ ಸೇನೆ ಸೂಚನೆ ನೀಡಿದೆ.




