
(ನ್ಯೂಸ್ ಕಡಬ) newskadaba.com ಕಡಬ, ನ. 14. SIR ಪ್ರಕ್ರಿಯೆಯಲ್ಲಿನ ರಾಜಕೀಯ ಪ್ರೇರಿತ ಅಕ್ರಮಗಳ ವಿರುದ್ಧ ಹಾಗೂ ಮುಖ್ಯ ಚುನಾವಣಾ ಅಧಿಕಾರಿಯ ವಜಾಕ್ಕೆ ಆಗ್ರಹಿಸಿ SKSSF ಕರ್ನಾಟಕ ರಾಜ್ಯ ಸಮಿತಿಯ ಕರೆಯಂತೆ SKSSF ಕಡಬ ವಲಯದ ವತಿಯಿಂದ ನವೆಂಬರ್ 13ರಂದು ಶುಕ್ರವಾರ ಕಡಬ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
SKSSF ಕಡಬ ವಲಯದ ಅಧ್ಯಕ್ಷರಾದ ಮುಹಮ್ಮದ್ ಕಲೀಮುಲ್ಲಾ ಕೆ ಪಿ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅಶ್ರಫ್ ಶೇಡಿಗುಂಡಿ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಅಬ್ದುಲ್ ಸಮದ್ ಬಾಖವಿ ಕಲಾರ ಅವರು ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ SKJM ಕಡಬ ರೇಂಜ್ ಅಧ್ಯಕ್ಷ ಅಲ್ಹಾಜ್ ಪಿ.ಎಂ. ಇಬ್ರಾಹಿಂ ದಾರಿಮಿ ಕಡಬ, SKMMA ಕಡಬ ರೇಂಜ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ ಹಾಗೂ ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಕಡಬ ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ SIR ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಖ್ಯ ಚುನಾವಣಾ ಅಧಿಕಾರಿಯನ್ನು ವಜಾಗೊಳಿಸಬೇಕು ಎಂಬ ಆಗ್ರಹಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪ ತಹಶೀಲ್ದಾರರಿಗೆ ಸಲ್ಲಿಸಲಾಯಿತು.ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಿಕ ಆಶಯಗಳ ರಕ್ಷಣೆಯ ನಿಟ್ಟಿನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ SKSSF ಕಾರ್ಯಕರ್ತರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.




